Monday, November 21, 2011

ನಂಬಿಕೆ...

ರಾಮಾಯಣ ಮುಗಿದು ಸುಮಾರು ೧೦ ವರ್ಷಗಳು ಕಳೆದಿದ್ದವು. ವಿಭೀಷಣನ ಆಳ್ವಿಕೆಯಲ್ಲಿ ಲಂಕೆ ಸುಭಿಕ್ಷೆಯಿಂದ ನಡೆದಿತ್ತು. ಒಮ್ಮೆ ರಾಮಾಯಣದಲ್ಲಿ ರಾವಣನ ರಾಕ್ಷಸ ಸೈನ್ಯದೊಂದಿಗೆ ಹೋರಾಡಿದ ಕಪಿರಾಯನೊಬ್ಬನಿಗೆ ಲಂಕೆಗೆ ಹೋಗಬೇಕಿತ್ತು. ಎಲ್ಲಾ ಮಾರ್ಗಗಳೂ ಕೊನೆಗೆ ಬಂದು ಸೇರುವುದು ಸಮುದ್ರ ದಡಕ್ಕೆ. ಕಪಿರಾಯನೂ ಅಲ್ಲಿಯವರೆಗೆ ಬಂದು ನಿಂತು ಯೋಚಿಸತೊಡಗಿದ.  "ಈಗ ಈ ಸಮುದ್ರವನ್ನು ದಾಟುವುದು ಹೇಗೆ?? ಅಂದಾದರೋ ಶ್ರೀರಾಮನ ಹೆಸರು ಬರೆದ ಬಂಡೆಗಳಿಂದ ಸೇತುವೆ ಕಟ್ಟಿ ದಾಟಿದ್ದಾಯಿತು. ಇಂದು? ಇಲ್ಲಿ ಯಾವ ಸೇತುವೆಯೂ ಕಾಣುತ್ತಿಲ್ಲ". ಹೀಗೆ ಯೋಚಿಸುತ್ತಾ ಕಪಿರಾಯ ಸಮುದ್ರ ದಂಡೆಯಲ್ಲಿ ಕುಳಿತಿರುವಾಗ ಅತ್ತ ಕಡೆಯಿಂದ ವಿಭೀಷಣ ಮಹಾರಾಜ ಸಮುದ್ರದ ಮೇಲೆ ನಿರಾಳವಾಗಿ ನಡೆದುಬರುತ್ತಿರುವುದು ಕಾಣಿಸಿತು. ಹತ್ತಿರ ಬಂದ ವಿಭೀಷಣನಿಗೆ ಕಪಿರಾಯ ವಂದಿಸಿ ತನ್ನ ಸಮಸ್ಯೆಯನ್ನು ಹೇಳಿಕೊಂಡ,
"ವಿಭೀಷಣ ಮಹಾರಾಜ, ನನಗೆ ಈ ಸಮುದ್ರವನ್ನು ದಾಟಿ ಅತ್ತ ನಿಮ್ಮ ರಾಜ್ಯಕ್ಕೆ ಹೋಗಬೇಕಿದೆ, ಹನುಮಂತನಂತೆ ಹಾರುವ ಶಕ್ತಿ ನನಗಿಲ್ಲ. ನೀವು ನೋಡಿದರೆ ಸಮುದ್ರದ ಮೇಲೆ ನಿರಾಳವಾಗಿ ನಿಶ್ಚಿಂತೆಯಿಂದ ನಡೆದು ಬಂದಿರಿ. ನನಗೂ ದಾರಿ ತೋರಿಸಿ."
ಮಂದಹಾಸದೊಂದಿಗೆ ವಿಭೀಷಣ ಹೇಳಿದ "ಕಪಿರಾಯ, ಅದು ಅತೀ ಸುಲಭ. ನನ್ನ ಬಳಿ ಮಂತ್ರಿಸಿದ ಒಂದು ಕಲ್ಲಿದೆ. ಕಲ್ಲಿನಮೇಲೆ ನೀರಿನ ಮೇಲೆ ನಡೆಯುವ ಮಂತ್ರವೊಂದು ಬರೆದಿದೆ. ಅದನ್ನು ನಿನ್ನ ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದು ಅದನ್ನು ಎದೆಗೊತ್ತಿಕೊಂಡು ಕಣ್ಣು ಮುಚ್ಚಿ ನಿರಿನಮೇಲೆ ಹೆಜ್ಜೆ ಇಡು. ಆ ಮಂತ್ರದ ಶಕ್ತಿಯಿಂದ ನೀನೂ ನಿರಿನಮೇಲೆ ನಡೆಯಬಹುದು. ಆದರೆ ಒಂದು ಷರತ್ತು, ನೀನು ಆ ಮಂತ್ರವನ್ನು ಓದುವ ಹಾಗಿಲ್ಲ. ಒಪ್ಪಿಗೆಯೇ? ಇಗೋ ತಗೋ ಮಂತ್ರ ಕಲ್ಲು."
"ಆಗಬಹುದು ಮಹಾರಾಜ, ತುಂಬಾ ಧನ್ಯವಾದಗಳು." ಹೇಳಿದ ಕಪಿರಾಯ ಕಣ್ಣುಮುಚ್ಚಿ ಮಂತ್ರಿಸಿದ ಕಲ್ಲನ್ನು ಎದೆಗೊತ್ತಿಕೊಂಡು ನಿರಿನಮೇಲೆ ಹೆಜ್ಜೆಯಿಟ್ಟು ನಡೆಯತೊಡಗಿದ. ಆಶ್ಚರ್ಯ ಎಂಬಂತೆ ಆತ ನಿಜಕ್ಕೂ ನಿರಿನಮೇಲೆ ತೇಲುತ್ತಾ ನಡೆಯುತ್ತಿದ್ದ.
ಅರ್ಧ ಸಮುದ್ರ ತಲುಪಿದ ಕಪಿರಾಯನ ತಲೆಯಲ್ಲಿ ಪ್ರಶ್ನೆ ಹುಳವೊಂದು ಓಡತೊಡಗಿತು. "ವಿಭೀಷಣ ಕೊಟ್ಟ ಇಷ್ಟು ಚಿಕ್ಕ ಕಲ್ಲಿನಲ್ಲಿ ಯಾವ ಮಂತ್ರ ಬರೆದಿರಬಹುದು?, ಅಲ್ಲದೆ ನನಗೆ ಆ ಮಂತ್ರವನ್ನು ಓದಬಾರದೆಂದು ಯಾಕೆ ಹೇಳಿದರು? ಯಾಕೆ ಒಮ್ಮೆ ನೋಡಿಬಿಡಬಾರದು? ಸುತ್ತ ಯಾರೂ ಇಲ್ಲ, ಸುಮ್ಮನೆ ಒಮ್ಮೆ ನೋಡಿ ಪುನಃ ಹಾಗೆಯೇ ಇಟ್ಟುಕೊಂಡು ನಡೆದರಾಯಿತು" ಎಂದುಕೊಂಡವನೇ ಕಪಿರಾಯ ಮೆಲ್ಲನೆ ಕಣ್ಣುತೆರೆದು ಮುಷ್ಠಿ ಬಿಡಿಸಿ ಕಲ್ಲನ್ನು ತೆರೆದು ನೋಡಿದ.
ಅದರಲ್ಲಿ "ಶ್ರೀರಾಮ" ಎಂದು ಬರೆದಿತ್ತು.
ಕಪಿರಾಯನಿಗೆ ಆಶ್ಚರ್ಯವಾಯಿತು. "ಇದೇನಿದು ಈ ಕಲ್ಲಿನಮೇಲೆ ಯಾವ ಮಂತ್ರವೂ ಇಲ್ಲ !!"
ಹಿಂದೆ ಮುಂದೆ ಎಲ್ಲಾ ತಿರುಗುಸಿ ನೋಡಿದ, ಉಹುಂ, ಬೇರೇನೂ ಇಲ್ಲ.
"ಬರಿಯ ಶ್ರೀರಾಮ? ಇದೆಂತಾ ಮಂತ್ರ? ಬರಿಯ ಈ ಕಲ್ಲಿನಿಂದ ಸಮುದ್ರ ದಾಟಬಹುದೇ?" ಎಂದುಕೊಂಡದ್ದೇ ತಡ, ಕಪಿರಾಯ ಗುಳಕ್ ಎಂದು ನೀರಿನಲ್ಲಿ ಮುಳುಗಿಹೋದ..
"ಕಾಪಾಡಿ... ಯಾರದ್ರೂ ಕಾಪಾಡಿ.. ನಾನು ಮುಳುಗುತ್ತಿದ್ದೇನೆ.. ಕಾಪಾಡಿ" ಎಂದು ಮೂರು ನಾಲ್ಕು ಬಾರಿ ನೀರು ಕುಡಿದಮೇಲೆ ವಿಭೀಷಣ ಬಂದು ಆತನನ್ನು ಮೇಲೆತ್ತಿ ದಡಕ್ಕೆ ತಂದು ಹಾಕಿದ.
ಮೆಲ್ಲ ಸುಧಾರಿಸಿಕೊಂಡು ಕಪಿರಾಯ, "ಮಹಾರಾಜ ಏನಿದು, ಆ ಕಲ್ಲಿನಲ್ಲಿ ಯಾವ ಮಂತ್ರವೂ ಬರೆದಿರಲಿಲ್ಲ, ಬರೀ ಶ್ರೀರಾಮ ಎಂದಷ್ಟೇ ಬರೆದಿತ್ತು."
ಮತ್ತೆ ಮುಗುಳುನಕ್ಕು ವಿಭೀಷಣ ಹೇಳಿದ "ಅಯ್ಯೋ ಕಪಿರಾಯ, ನೀನು ಆ ಕಲ್ಲನ್ನು ಹಿಡಿದು ಅರ್ಧ ಸಮುದ್ರ ದಾಟಿದ್ದಿ. ಅದು ಕಲ್ಲಿನ ಮಹಿಮೆಯೂ ಅಲ್ಲ, ಶ್ರೀರಾಮನ ಮಹಿಮೆಯೂ ಅಲ್ಲ. ಆ ಕಲ್ಲಿನಮೇಲೆ ಯಾವುದೋ ಮಂತ್ರವಿದೆ ಎಂದು ನೀನು ನಂಬಿದ್ದೆಯಲ್ಲ, ಆ ನಂಬಿಕೆಯ ಮಹಿಮೆ. ಆ ಕಲ್ಲಿನ ಮಂತ್ರಶ್ಕ್ತಿಯಿದ್ದರೆ ನೀನು ಸಮುದ್ರವನ್ನು ದಾಟಬಲ್ಲೆ ಎಂದು ನೀನು ನಂಬಿದ್ದ ನಿನ್ನ ಆತ್ಮ ವಿಶ್ವಾಸದ ಮಹಿಮೆ ಅಷ್ಟೇ. ನಾನು ನೋಡಬೇಡವೆಂದರೂ ಸಮುದ್ರ ಮಧ್ಯದಲ್ಲಿ ನೀನು ಕಲ್ಲನ್ನು ತೆರೆದು ನೋಡಿದೆ,
ನಿನಗೆ ಆ ಕಲ್ಲಿನಮೇಲೆ ಇದ್ದ ನಂಬಿಕೆ ಕಳೆದುಕೊಂಡೆ, ಜತೆಗೆ ಮಂತ್ರದ ಶಕ್ತಿ ಇದೆ ಎಂಬ ನಂಬಿಕೆಯನ್ನೂ ಕಳೆದುಕೊಂಡೆ. ಅಷ್ಟೇ, ನೀನು ಮುಳುಗಿಹೋದೆ.

ನಮ್ಮೆಲ್ಲರ ಜೀವನವೂ ಇಂತಹದೇ ರೀತಿಯಲ್ಲಿ ಸಾಗುತ್ತಿದೆ. ಮನುಷ್ಯನಲ್ಲಿ ನಂಬಿಕೆ ಎಂಬ ದ್ರವ ದಿನಬರುತ್ತಾ ಆವಿಯಾಗುತ್ತಿದೆ.  ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಸ್ವ ಶಕ್ತಿಯ ಮೇಲೆ ನಂಬಿಕೆ ಕುಂಟಿತವಾಗಿದೆ. ತನ್ನ ಸಾಮರ್ಥ್ಯದಬಗ್ಗೆ ನಂಬಿಕೆ ಕ್ಷೀಣವಾಗಿದೆ. ಏನನ್ನೂ ನಂಬಲಾರದ ಸ್ಥಿಥಿ ಮನುಷ್ಯ ಈಗ ತಲುಪಿದ್ದಾನೆ.

ಇಂತಹ ಒಂದು ಅಸಹನೀಯ ಬೆಳವಣಿಗೆಗೆ ಕಾರಣವೆನಿರಬಹುದು, ಇದನ್ನು ತಿಳಿಯಲು ಪ್ರಯತ್ನ ಮಾಡಿದೆ. ತಕ್ಕ ಮಟ್ಟಿಗೆ ಕಾರಣಗಳನ್ನು ಕಂಡುಕೊಂಡೆ ಸಹ. ನನಗೆ ತಿಳಿದುಬಂದಂತೆ ನಮ್ಮ ನಂಬಿಕೆಗೆ ಘಾಸಿಗೊಳಿಸಿದ ಅಂಶಗಳೆಂದರೆ ನಮ್ಮಲ್ಲಿ ವೈಚಾರಿಕತೆಯ ಕೊರತೆ, ನಮ್ಮ ಋಣಾತ್ಮಕ ಯೋಚನೆಗಳು ಮತ್ತು ನಮ್ಮ ಅಪನಂಬಿಕೆಗಳು.

ವಿಚಾರ ಮಾಡುವ ಗುಣ ನಮ್ಮಿಂದ ಯಾವತ್ತೋ ದೂರಾಗಿದೆ. ದುಡುಕುವಿಕೆಯೇ ನಮ್ಮ ಸಾಧನ. ಯಾರೋ ಹೇಳಿದರು "ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..." ಸರಿ, ನುಗ್ಗುವುದೊಂದೇ ನಮ್ಮ ಗುರಿ ಈಗ. ಇದು ಅವರು ಹೇಳಿದ ವಾಕ್ಯದ ದುರುಪಯೋಗವೊ, ಅಥವಾ ನಮ್ಮ ಮೌಢ್ಯತೆಯೋ ನನಗೆ ಗೊತ್ತಿಲ್ಲ. ತಪ್ಪು ಮಾಡುತ್ತಿದ್ದೇವೆ ನಾವೆಲ್ಲ. ಪ್ರತಿ ವಿಷಯದಲ್ಲೂ ವೈಚಾರಿಕತೆ ಅಗತ್ಯ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದಿದ್ದಾರೆ ನಮ್ಮ ಹಿರಿಯರು. ಮಾಡಿದ ಕೃತಿಗಳ ಮನ-ಮಂಥನ ಅಗತ್ಯ (ನಿನ್ನೊಳಗಿನ ಅರಿವನ್ನು ಜಾಗ್ರತಗೊಳಿಸಿ). ತಪ್ಪಿದ್ದಲ್ಲಿ ತಿದ್ದಿಕೊಳ್ಳುವ ಭಾವನೆ ಅಗತ್ಯ. ಹೆಜ್ಜೆ ಹೆಜ್ಜೆಗೂ ಮನಶುದ್ಧಿ ಇರಲಿ, ತಾಳ್ಮೆ ನಮ್ಮ ಸಂಗಾತಿಯಾಗಿರಲಿ.
ಇನ್ನು ಋಣಾತ್ಮಕ ಯೋಚನೆಗಳು, ಇವು ನಮ್ಮ ವಿಕಾಸಕ್ಕೆ ಕೊಡಲಿ ಪೆಟ್ಟಿದ್ದಂತೆ. ಸಾಲದೆಂಬಂತೆ ಈ ಋಣಾತ್ಮಕ ಯೋಚನೆಗಳಿಗೆ ರೆಕ್ಕೆ ಪುಕ್ಕ ಕಟ್ಟಿ ಹಾರಬಿಟ್ಟಿದ್ದೇವೆ, ನಮ್ಮ ಮನಸಿನ ಧನಾತ್ಮಕ ಭಾವನೆಗಳ ಬಲಿಕೊಟ್ಟು ಋಣಾತ್ಮಕಕ್ಕೆ ನೀರೆರೆಯುತ್ತಿದ್ದೇವೆ. ನನಗೆ ತಿಳಿದಂತೆ, ಸಹಜವಾಗಿ, ಈ ಋಣಾತ್ಮಕ ವಿಚಾರಗಳಿಗೆ ಸ್ವತಃ ಯಾವುದೇ ಬಲವಿರುವುದಿಲ್ಲ, ಬದಲಾಗಿ ನಾವು ಇದರಬಗ್ಗೆ ಆಲೋಚಿಸಿ ಆಲೋಚಿಸಿ, ಇದಕ್ಕೆ ಬಲ ನೀಡುತ್ತಿದ್ದೇವೆ.
ಇನ್ನು ಅಪನಂಬಿಕೆಯ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. "ನಮಗೆ ನಮ್ಮ ಸ್ವಸಾಮರ್ಥ್ಯದಬಗ್ಗೆ ಬಹಳ ಅನುಮಾನ ಹಾಗೂ ನಮ್ಮ ಅನುಮಾನದಮೇಲೆ ಬಹಳ ನಂಬಿಕೆ", ಏನಂತಿರಿ ಇದಕ್ಕೆ? ಒಂದು ನಕಾರಾತ್ಮಕ ವಿಷಯವನ್ನು ಹೇಳುವಾಗ ನಮಗೆ ಎಷ್ಟು ನಂಬಿಕೆ ಅಂದರೆ, "ನೋಡ್ತಾ ಇರು ಇವತ್ತು ಖಂಡಿತಾ ನಿನಗೆ ಕೆಲಸ ಸಿಗೋಲ್ಲ", "ಇವತ್ತು ನಾನು ಪರೀಕ್ಷೆಯಲ್ಲಿ ಫೈಲೆ", "ಈ ನೀರು ಕುಡಿದರೆ ನನಗೆ ಖಂಡಿತಾ ಜ್ವರ ಬರುತ್ತೆ", "ಇವತ್ತು ಮಳೆಯಲ್ಲಿ ನೆನೆದಿದ್ದೇನೆ, ನಾಳೆ ನನಗೆ ಜ್ವರ ಗ್ಯಾರಂಟಿ". ಎಷ್ಟು ಖಡಾಖಂಡಿತವೆಂದರೆ ಇನ್ನೇನು ಆಗದ್ದೂ ಆಗಿಬಿಡಬೇಕು, ಅಂತಹ ನಂಬಿಕೆ ನಮಗೆ. ಅದೇ ನಂಬಿಕೆ ನಮಗೆ ನಮ್ಮ ಆತ್ಮವಿಶ್ವಾಸದಮೇಲೆ ಇಲ್ಲ. "ನಾನಿವತ್ತು ಈ ಪೂರ್ತಿ ಪುಸ್ತಕ ಓದಿ ಮುಗಿಸಿಯೇ ಮುಗಿಸುತ್ತೇನೆ", "ನನಗೆ ಇವತ್ತು ಖಂಡಿತ ಆ ಕೆಲಸ ದೊರೆಯುತ್ತದೆ", "ನನ್ನಷ್ಟು ಆರೋಗ್ಯವಂತ ಇನ್ನಿಲ್ಲ, ನನಗೆ ಯಾವುದೇ ರೋಗ ಅಂಟಲಾರದು" ಇಂತಹ ಧನಾತ್ಮಕ ಯೋಚನೆಗಳು ತಲೆ ಕೆಳಗೆ ಮಾಡಿ ನಿಂತರೂ ನಮಗೆ ಬರುವುದಿಲ್ಲ. ನನ್ನನ್ನು ಹೊರತುಪಡಿಸಿ ನಾನೇನೂ ಮಾತನಾಡುತ್ತಿಲ್ಲ. ಇದು ನನ್ನ ಸಮಸ್ಯೆಯೂ ಹೌದು. ಪರಿಹಾರ ನನಗೆ ತಿಳಿದಂತೆ ನಮ್ಮಲ್ಲೇ ಇದೆ; ವೈದ್ಯರ ಮಾತ್ರೆ ಔಷಧಿಗಳಲ್ಲ, ನಮಗೆ ನಮ್ಮ ಸ್ವ-ಬದಲಾವಣೆಯ ಅಗತ್ಯ ಇದೆ.

ನನ್ನ ಗೆಳೆಯನೊಬ್ಬ ನನ್ನಲ್ಲಿ ಮೊಂಡು ವಾದ ಮಾಡುತ್ತಾ ಕೇಳಿದ, "ವಿಜ್ನಾನ ಇಂತಹ ಬೆಳವಣಿಗೆ ಕಾಣುತ್ತಿದೆ, ಅತ್ಯಾಕರ್ಷಕ ಅಪರಿಮಿತ ಅನ್ವೇಷಣೆಗಳು ನಡೆಯುತ್ತಿವೆ, ಭೂಮಿ ಮೇಲಿನ ಹುಟ್ಟು ಸಾವು ಇದರಬಗ್ಗೆ ಈಗಾಗಲೇ ಹಲವಾರು ಅಂಶಗಳನ್ನು ವಿಜ್ನಾನ ಬಯಲಿಗೆಳೆದಿದೆ, ಇಂತಹ ಸ್ಥಿತಿಯಲ್ಲೂ ನೀನು ದೇವರು, ಸೃಷ್ಟಿಕರ್ತ ಇದೆಲ್ಲ ನಂಬುತ್ತೀಯಾ?". ನಿಜಕ್ಕೂ ಆತನಿಗೆ ಉತ್ತರ ಕೊಡುವಷ್ಟು ಜ್ನಾನ ನನಗಿರಲಿಲ್ಲ, ಈಗಲೂ ಇಲ್ಲ ಬಿಡಿ, ಆದರೆ ಕೆಲವು ದಿನದ ಹಿಂದೆ ಒಂದು ಸಣ್ಣ ಕಥೆಯನ್ನು ಓದಿದೆ, ನಿಮ್ಮೊಂದಿಗೆ ಇದನ್ನು ಹಂಚಿಕೊಳ್ಳಬೇಕೆಂದು ಅನ್ನಿಸುತ್ತಿದೆ,

ಒಂದ್ ಸಲ ಸರ್ ಥೋಮಸ್ ಆಳ್ವ ಎಡಿಸನ್ ರೈಲಲ್ಲಿ ಹೋಗುತ್ತಿದ್ದಾಗ ಬೈಬಲ್ ಓದುತ್ತಾ ಕುಳಿತಿದ್ದರು. ಪಕ್ಕದಲ್ಲಿ ಇರೋ ಒಬ್ಬ ಯಂಗ್ ಇಂಜಿನಿಯರ್ ಇವರ ಬಗ್ಗೆ ತಿಳಯದೆ "ಎಂತಾ ಸ್ಟುಪಿಡ್ ಜನರು, ವಿಜ್ಞಾನ ಇಷ್ಟು ಮುಂದುವರಿದಿರಬೇಕಾದ್ರೆ, ಇನ್ನೂ ಅದೇ ಹಳೇ ಬೈಬಲ್ ಓದ್ತಾ ಕುತಿದಿರ. ನಾಚ್ಕೆ ಅನ್ನಿಸೋಲ್ವಾ ನಿಮಗೆ" ಅಂದ. ಅದಿಕ್ಕೆ ಎಡಿಸಿನ್ "ಯಾಕೆ ಮರಿ, ಬೈಬಲ್ ಓದೋದ್ರಿಂದ ಏನೂ ಪ್ರಯೋಜನ ಇಲ್ಲಾ ಅಂತಿಯ?" ಕೇಳಿದ್ರು. ಅದಿಕ್ಕೆ ಯಂಗ್ ಇಂಜಿನಿಯರ್ "ಏನೂ ಪ್ರಯೋಜನ ಇಲ್ಲಾ ಓಲ್ಡ್ ಮ್ಯಾನ್. ವಿಜ್ಞಾನ ಎಷ್ಟೋ ಮುಂದುವರಿದಿದೆ, ಸೃಷ್ಟಿಯ ಎಷ್ಟೋ ಅಂಶಗಳನ್ನ ನಾವು ಕಂಡುಹಿಡಿದ್ದೀವಿ,  ನಾವು ಬೇರೆ ಜಗದ ಜೀವಿಗಳ ಜತೆಗೆ ಸಂಪರ್ಕ ಮಾಡಲು ಟ್ರೈ ಮಾಡ್ತಾ ಇದ್ದಿವಿ.. ಬ್ಲಾ ಬ್ಲಾ ಬ್ಲಾ.. ನಿಂಗೆ ಈಗ ಎಲ್ಲಾ ವಿವರಣೆ ಕೊಡೋದಿಕ್ಕೆ ನನಗೆ ಸಮಯ ಇಲ್ಲ, ಒಂದು ಬಾರಿ ನನ್ನ ಲ್ಯಾಬ್ ಗೆ ಬಾ, ಎಲ್ಲಾ ಡೆಮೋ ಜೊತೆಗೆ ಪೂರ್ತಿಯಾಗಿ ವಿವರಣೆ ಕೊಡ್ತೀನಿ, ನಿಮ್ಮಂತಹ ಹಳೆಕಾಲದ ಜನರನ್ನ ತಿದ್ದಿ ಸರಿಪಡಿಸುವುದು ನಮ್ಮಂತಹ ಯಂಗ್ ಜನರೇಷನ್ರ ಕರ್ತವ್ಯ ಕೂಡ" ಅಂತಾ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟ. ಎಡಿಸನ್ ಆ ಕಾರ್ಡ್ ನ ಜೇಬಲ್ಲಿ ಇಟ್ಟುಕೊಂಡರು. ಯಂಗ್ ಇಂಜಿನಿಯರ್ "ನಿನ್ನ ಪರಿಚಯಕ್ಕೆ ನಿನ್ನ ಕಾರ್ಡ್ ಏನಾದ್ರೂ ಇದ್ರೆ ಕೊಡು" ಅಂದ. ಎಡಿಸನ್ ತನ್ನ ವಿಸಿಟಿಂಗ್ ಕಾರ್ಡ್ ತೆಗೆದು ಕೊಟ್ರು. ಕಾರ್ಡ್ ನೋಡಿದ ಯಂಗ್ ಇಂಜಿನಿಯರ್, "ಒಹ್ ಮೈ ಗಾಡ್, ದಿ ಗ್ರೇಟ್ ಸರ್ ಥೋಮಸ್ ಎಡಿಸನ್, ಐ ಯಾಮ್ ಸೋರಿ ಸರ್" ಹೇಳಿ ಅವ್ರ ಕಾಲಿಗೆ ಬಿದ್ದ. "ಸರ್, ನೀವು ಅಂತ ಗೊತ್ತಿಲ್ಲದೆ ಮಾತನಾಡಿದೆ, ತಪ್ಪಾಯ್ತು, ಕ್ಷಮಿಸಿ ನನ್ನನ್ನು" ಅಂದ. ಎಡಿಸನ್ ಮುಗುಳುನಗುತ್ತ ಅಂದರು "ಪರವಾಗಿಲ್ಲ ಮರಿ, ನಿನ್ನದೇನೂ ತಪ್ಪಿಲ್ಲ ಬಿಡು, ನಿನ್ನ ವಯಸ್ಸಿಗೆ ತಕ್ಕಂತೆ ಮಾತನಾಡಿದ್ದೀಯಾ". ಯಂಗ್ ಇಂಜಿನಿಯರ್ "ಸರ್, ನಿಮಗೆ ನನ್ನ ಮೇಲೆ ಬೇಜಾರಿಲ್ಲ ಅಂದ್ರೆ, ನಿಮ್ಮ ಲ್ಯಾಬ್ ಗೆ ಒಂದು ಸಾರಿ ಬರಬೇಕು ನಾನು, ಒಂದು ಅಪಾಯಿಂಟ್ಮೆಂಟ್ ಕೊಡಿ ಸರ್" ಅಂದ. ಅದಿಕ್ಕೆ ಎಡಿಸನ್ "ನನ್ನ ಲ್ಯಾಬ್ ಯಾವಾಗಲು ತೆರೆದೇ ಇರುತ್ತೆ, ನೀನು ಯಾವಾಗ ಬೇಕಾದ್ರು ಬರಬಹುದು" ಅಂದ್ರು. ಅವರಿಗೆ ಥ್ಯಾಂಕ್ಸ್ ಹೇಳಿ ಯಂಗ್ ಇಂಜಿನಿಯರ್ ಅಲ್ಲಿಂದ ಹೊರಟುಹೋದ.
ಮಾರನೆ ದಿನ, ಯಂಗ್ ಇಂಜಿನಿಯರ್ ಎಡಿಸನ್ ಲ್ಯಾಬ್ ಗೆ ಭೇಟಿ ಕೊಟ್ಟ. ಅಲ್ಲಿದ್ದ ಚಿತ್ರ ವಿಚಿತ್ರ ಮಾಡೆಲ್ಲುಗಳು, ಎಕ್ಷಪೆರಿಮೆಂಟ್ಗಳು ಎಲ್ಲಾ ನೋಡಿ ತಲೆ ತಿರುಗುವುದೊಂದು ಬಾಕಿ ಆತನಿಗೆ. ಕೊನೆಗೆ ಅಲ್ಲಿದ್ದ ಒಂದು ಸೌರವ್ಯೂಹದ ಮಾಡೆಲ್ ನೋಡಿ ಬಾಳ ಸಂತೋಷಪಟ್ಟು ಯಂಗ್ ಇಂಜಿನಿಯರ್ ಕೇಳಿದ "ಸರ್ ಈ ಸೌರವ್ಯೂಹದ ಮಾಡೆಲ್ ತುಂಬಾ ಚೆನ್ನಾಗಿದೆ, ನೀವು ಮಾಡಿದ್ದ?". ಅದಿಕ್ಕೆ ಎಡಿಸನ್ "ಎಲ್ಲಿ, ಅರೇ ಇದು ಹೇಗೆ ಬಂತು ಇಲ್ಲಿಗೆ? ಯಾರು ತಂದಿದ್ದು. ನನಗೆ ಗೊತ್ತಿಲ್ಲ, ಇದು ಯಾರು ಮಾಡಿದ್ದು ಅಂತ. ಇದು ಇಲ್ಲಿಗೆ ಹೇಗೆ ಬಂತು, ಇಷ್ಟೊತ್ತು ಇರಲಿಲ್ಲವಲ್ಲಾ ಇದು?" ಅಂದರು. ಯಂಗ್ ಇಂಜಿನಿಯರ್ "ತಮಾಷೆ ಮಾಡಬೇಡಿ ಸರ್, ಇಲ್ಲಿಗೆ ನನ್ನ ಬಿಟ್ಟು ಬೇರೆ ಯಾರು ಬಂದಿಲ್ಲ ಈಗ, ಇದು ತನ್ನಷ್ಟಕ್ಕೆ ತಾನೇ ಹೇಗೆ ಬರೋಕೆ ಸಾದ್ಯ. ಇದು ನೀವು ಮಾಡಿದ್ದೆ ಇರಬೇಕು" ಅಂದ.
ಅದಿಕ್ಕೆ ಎಡಿಸನ್ "ಹೌದೇ, ಇಷ್ಟು ಸಣ್ಣ ಸೌರವ್ಯೂಹದ ಮಾಡೆಲ್ ತನ್ನಿಂದ ತಾನೇ ಬರೋಕೆ ಸಾದ್ಯ ಇಲ್ಲಾ ಅಂತಾ ಆದ್ರೆ, ನಾವಿರೋ ನಿಜವಾದ ಸೌರ ಮಂಡಲ, ಈ ಜಗತ್ತು ಎಲ್ಲಾ ತನ್ನಿಂದ ತಾನೇ ಬರೋಕೆ ಸಾದ್ಯ ಇಲ್ಲಾ ತಾನೇ? ಇಷ್ಟು ಸಣ್ಣ ಸೌರವ್ಯೂಹದ ಮಾಡೆಲ್ ಮಾಡೋದಿಕ್ಕೆ ಯಾರೋ ಒಬ್ಬರು ಬೇಕೇ ಬೇಕು ಅಂತಿದ್ದರೆ, ಅಂತಹ ದೊಡ್ಡ ಸೌರವ್ಯೂಹದ ಸೃಷ್ಟಿಕರ್ತ ಒಬ್ಬ ಇರಲೇ ಬೇಕು ಅಲ್ವಾ?"
".. ಅದನ್ನೇ ನಿನ್ನೆ ನಾನು ಬೈಬಲ್ ನಲ್ಲಿ ಓದಿ ತಿಳಿದುಕೊಳ್ಳೋಕೆ ಪ್ರಯತ್ನ ಮಾಡ್ತಾ ಇದ್ದೆ" ಅಂದ್ರು..

ನಮ್ಮ ಹಿರಿಯರು ಬದುಕಿಗೆ ಹಲವು ಉತ್ತಮ ಅಂಶಗಳನ್ನು ಕೊಟ್ಟು ಹೋಗಿದ್ದಾರೆ. ಉತ್ತಮ ಮಾರ್ಗವೊಂದನ್ನು ಆರಿಸಿಕೊಂಡು ಆ ಮಾರ್ಗದಲ್ಲಿ ನಂಬಿಕೆಯೊಂದಿಗೆ ನಡೆಯಬೇಕಾದ್ದು ನಮ್ಮ ಕರ್ತವ್ಯ. ಸ್ವ-ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ, ಅಪನಂಬಿಕೆ ಬೇಡ. ಧನಾತ್ಮಕತೆ ನಮ್ಮ ಶಕ್ತಿಯಾಗಿರಲಿ, ಋಣಾತ್ಮಕತೆ ಬೆಳೆಯಲು ಅವಕಾಶ ಕೊಡದಿರಿ. ಮಾಡುವ ಕೃತಿಯಲ್ಲಿ ವೈಚಾರಿಕತೆ ಇರಲಿ, ದುಡುಕುತನ ಬೇಡ.

ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ |
ನಂಬಿಯೂ ನಂಬದಿರುವಿಬ್ಬಂದಿ ನೀನು ||
ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು |
ಸಿಂಬಳದ ನೊಣ ನೀನು - ಮಂಕುತಿಮ್ಮ||

-- ಧೃಡ ನಂಬಿಕೆಗೆ ಪ್ರಹ್ಲಾದ ಮತ್ತು ಹಿರಣ್ಯಕಶಿಪು ಇಬ್ಬರೂ ಉತ್ತಮ ಉದಾಹರಣೆಗಳು. ಹರಿಯೇ ಸರ್ವಸ್ವವೆಂಬ ಧೃಡ ನಂಬಿಕೆ ಮಗನದಾದರೆ, ಹರಿ ಎಂಬುವನೇ ಇಲ್ಲ, ಇದ್ದರೂ ಅವನು ನಮ್ಮ ಶತ್ರು ಎಂಬ ಅಪನಂಬಿಕೆ ತಂದೆಯಾದ ಹಿರಣ್ಯಕಶಿಪುವಿನದು. ಅವರವರ ನಂಬಿಕೆಗೆ ತಕ್ಕಂತೆ ನಂಬದ ತಂದೆಗೆ ಉಗ್ರರೂಪಿ ನರಸಿಂಹನಾಗಿ, ನಂಬಿದ ಮಗನಿಗೆ ವಿಶ್ವರೂಪಿ ನಾರಾಯಣನಾಗಿ ಬಂದ ಪರಮಾತ್ಮನು, ಅವರವರ ನಂಬಿಕೆಗೆ ತಕ್ಕಂತಹ ಮೋಕ್ಷವನ್ನು ಕರುಣಿಸಿದನಲ್ಲವೇ?