Monday, February 6, 2012

ಬಸ್ ನಿಲ್ದಾಣದಲ್ಲಿ 2 ಗಂಟೆ

ಇವತ್ತು ಶನಿವಾರ, ಆಫೀಸಿಗೆ ರಜ. ಬೆಳಿಗ್ಗೆ ತಿಂಡಿ ತಿಂದು ಬಂದು ಏನಾದರು ಪ್ಲಾನ್ ಮಾಡೋಣ ಎಂದುಕೊಂಡು ನನ್ನ ಸ್ನೇಹಿತನಿಗೆ ಪೋನ್ ಮಾಡಿದೆ, ಸ್ವಿಚ್-ಆಫ್ ಅಂತ ಬಂತು. ಸರಿ ಇನ್ನೇನು ಮಾಡುವುದು, ಇವತ್ತಿನ ದಿನ ಕಳೆಯಬೇಕಲ್ಲ, ಏನು ಮಾಡಲಿ. ನನ್ನ ಲ್ಯಾಪ್-ಟಾಪ್ ಬಿಚ್ಚಿ ಕುಳಿತೆ. ಫೆಸ್-ಬುಕ್, ಜೀ-ಮೇಲ್ ಎಲ್ಲಾ ಆಯ್ತು. ಇನ್ನೂ ಗಂಟೆ ಹತ್ತುವರೆ ಅಷ್ಟೇ. ಲ್ಯಾಪ್-ಟಾಪ್ ಮಡಚಿಟ್ಟು, ಬುಕ್ಕೊಂದನ್ನು ತೆಗೆದು ಕುಳಿತು ಓದ ತೊಡಗಿದೆ. ಯಾಕೋ ಓದಲು ಮನಸ್ಸೇ ಬರುತ್ತಿಲ್ಲ, ಎಳೆದು ಎಳೆದು ಅಂತೂ ಇಂತೂ ಹನ್ನೊಂದು ಗಂಟೆ ತನಕ ದೂಡಿದೆ. ಇದ್ಯಾಕೋ ಸರಿಬರುತ್ತಿಲ್ಲ, ಸರಿ ಹೊರಗೆಲ್ಲಾದರೂ ಹೋಗಿಬರೋಣ ಎಂದು ಡ್ರೆಸ್ ಮಾಡಿಕೊಂಡು, ರೂಂ ಬೀಗ ಹಾಕಿ ಹೊರಟೆ. ಬೈಕ್ ಬೇಡ ನಡೆದೇ ಹೋಗೋಣ ಎಂದು ತೀರ್ಮಾನಿಸಿದೆ.
ಸುಮ್ಮನೆ ನಡೆಯುತ್ತಾ ನಮ್ಮ ಮನೆಯಿಂದ ಸುಮಾರು ೨೦೦ ಮೀಟರ್ ದೂರದಲ್ಲಿ ಬಸ್-ನಿಲ್ದಾಣವೊಂದಿದೆ ಅದರ ಬಳಿ ಬಂದೆ. ಎಣಿಸಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಜನರಿದ್ದರು ಇವತ್ತು. ಎಲ್ಲಾ ತಮ್ಮ ತಮ್ಮ ಬಸ್ ಗಾಗಿ ಕಾಯುತ್ತಿದ್ದರು. ಕೆಲವರು ಅಲ್ಲಿದ್ದ ಬೆಂಚ್ ಮೇಲೆ ಕುಳಿತಿದ್ದರು, ಇನ್ನು ಕೆಲವರು ನಿಂತಿದ್ದರು. ನಾನೂ ನಿಂತಿದ್ದವರ ಬಳಿ ಹೋಗಿ ನಿಂತೆ, ಕುಳಿತುಕೊಳ್ಳಲು ಜಾಗ ಇರಲಿಲ್ಲ.

ಅಷ್ಟರಲ್ಲಿ ಬಸ್ಸೊಂದು ಬಂತು, ಕುಳಿತಿದ್ದ ಇಬ್ಬರು ಹುಡುಗರು ಮತ್ತು ನಿಂತಿದ್ದ ಒಬ್ಬ ವಯಸ್ಸಾದ ಮುದುಕರೊಬ್ಬರು  ಬಸ್ ಹತ್ತಿದರು. ಹುಡುಗರು ಬೆಂಚ್ ಮೇಲೆ ಕುಳಿತಿದ್ದರು, ವಯಸ್ಸಾದ ಮುದುಕರೊಬ್ಬರು ನಿಂತಿದ್ದರು! ನನಗಿನ್ನೂ ನೆನಪಿದೆ, ನಾನು ಪಿ.ಯು.ಸಿ ಓದುತ್ತಿದ್ದಾಗ, ಬಸ್ ಪ್ರಯಾಣ ಮಾಡುತ್ತಿದ್ದಾಗ, ನಾವು ಹುಡುಗರು ಕುಳಿತಿದ್ದ ಸೀಟಿನ ಪಕ್ಕ ವಯಸ್ಸಾದವರು ಯಾರಾದರು ಬಂದು ನಿಂತರೆ ನಾವು ಎದ್ದು ಅವರಿಗೆ ನಮ್ಮ ಸೀಟ್ ಬಿಟ್ಟು ಕೊಡುತ್ತಿದ್ದೆವು. ಈಗಿನ ಜನರೇಶನ್ ಬೇರೆನೇ ತರಹ. ಬಿಡಿ, ನಿಜಕ್ಕೂ ಈಗ ನನಗೂ ಆ ಆಚಾರ ಉಳಿದಿಲ್ಲ ಅಂದು ಕಾಣಿಸುತ್ತದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಕೂಡ ಸಹಜ. ಅಲ್ಲಿ ನಿಂತಿದ್ದ ಬಸ್ ಹೊರಟು ಹೋಯಿತು. ಇನ್ನೂ ಹಲವರು ತಮ್ಮ ಬಸ್ ಗೋಸ್ಕರ ಕಾಯುತ್ತಿದ್ದರು. ನನ್ನ ಪಕ್ಕದಲ್ಲಿದ್ದ ಒಂದು ಸೀಟಿನಲ್ಲಿ ನಾನು ಹೋಗಿ ಕುಳಿತೆ, ಇನ್ನೊಂದು ಸೀಟಿನಲ್ಲಿ, ನನ್ನ ಎಡ ಪಕ್ಕ, ಹೆಂಗಸೊಬ್ಬರು ಬಂದು ಕುಳಿತು ತಮ್ಮ ಸೆರಗಿನಿಂದ ಗಾಳಿ ಬೀಸಿಕೊಳ್ಳುತ್ತಾ "ಉಸ್ಸಾ..." ಎಂದು ಉಸಿರು ಬಿಟ್ಟರು. ಪಾಪ ಎಷ್ಟೊತ್ತಿಂದ ಕಾಯುತ್ತಿದ್ದರೋ ಏನೋ; ಬಸ್ ಗಾಗಿ ಅಲ್ಲ, ಬೆಂಚ್ ಗಾಗಿ.

ಅಷ್ಟರಲ್ಲಿ ನನ್ನ ಬಲ ಪಕ್ಕ ಕುಳಿತಿದ್ದ ಗಂಡಸೊಬ್ಬ "ಸಾರ್ ಟೆಯಿಮು (ಟೈಮ್) ಎಷ್ಟಾಯ್ತು?" ಎಂದ. ಹಾ, ನಿಮಗೆ ನನ್ನ ವಾಚ್ ಬಗ್ಗೆ ಹೇಳಬೇಕು. ನನ್ನ ಬಳಿ ಅಪ್ಪ ತೆಗಿಸಿಕೊಟ್ಟ ಒಂದು ಬೆಳ್ಳಿ ಬಣ್ಣದ ಟೈಟಾನ್ ವಾಚ್ ಇದೆ. ನಾನು ಇಂಜಿನಿಯರಿಂಗ್ ಓದುವಾಗ ಅಪ್ಪ ಕೊಡಿಸಿದ್ದು,  ಈಗ ಅದಕ್ಕೆ ಸುಮಾರು ೭ ವರ್ಷ, ಇನ್ನೂ ತುಂಬಾ ಚೆನ್ನಾಗಿ ನಡೆಯುತ್ತಿದೆ ಮತ್ತು ಚೆನ್ನಾಗಿ ಇಟ್ಟುಕೊಂಡಿದ್ದೇನೆ ಕೂಡ. ಹೊರಗೆ ಹೋಗುವಾಗಲೆಲ್ಲ ನಾನದನ್ನು ಕಟ್ಟಿಕೊಳ್ಳುತ್ತೇನೆ. ಅದೇನೋ ಗೊತ್ತಿಲ್ಲ, ಇಲ್ಲಿಯ ತನಕ ತುಂಬಾ ಸಾರಿ ಗಮನಿಸಿದ್ದೇನೆ, ಹೊರಗೆ ಹೋದಾಗಲೆಲ್ಲ ಜನ ಬಂದು ಬಂದು ನನ್ನ ಬಳಿ ಟೈಮ್ ಕೇಳುತ್ತಾರೆ. ಇವತ್ತು ಕೇಳಿದವನು ಹೆಚ್ಚು ಕಡಿಮೆ ಸಾವಿರದೈದ್ನುರನೇ ಆಸಾಮಿ ಇರಬಹುದೇನೋ. ಇರಲಿ, ನಾನು ವಾಚ್ ನೋಡಿ ಅವನಿಗೆ "ಹನ್ನೊಂದು ಕಾಲು" ಅಂದೆ. ಆತ "ಸಾರ್ ಈ ಅಗರ ಹೋಗೋ ಬಸ್ಸು ಎಷ್ಟೊತ್ತಿಗೆ ಬತ್ತದೆ?" ಅಂದ. ನಾನೇನು ಇವನ ಕಣ್ಣಿಗೆ ಬಸ್ ಕಂಡಕ್ಟರ್ ತರ ಕಾಣಿಸ್ತಿನಾ ಹೇಗೆ, ಇರೋ ಬಸ್ ನ ಟೈಮ್ ಎಲ್ಲಾ ತಿಳಿದಿರೋಕೆ. "ನನಗೆ ಗೊತ್ತಿಲ್ಲ ಸರ್" ಅಂದೆ. ಅಷ್ಟರಲ್ಲಿ ಹೆಬ್ಬಾಳ ಹೋಗುವ ಬಸ್ಸೊಂದು ಬಂತು, ನನ್ನ ಪಕ್ಕ ಕುಳಿತಿದ್ದ ಹೆಂಗಸೂ ಸೇರಿ, ಅಲ್ಲಿದ್ದ ಸುಮಾರು ಜನ ಬಸ್ ಹತ್ತಿದರು. ಟೈಮ್ ಕೇಳಿದ ಆಸಾಮಿನೂ ಅದೇ ಬಸ್ ಹತ್ತಿದ. ಬಸ್ ಹೊರಟು ಹೋಯಿತು. ಬಸ್ ನಿಲ್ದಾಣದಲ್ಲಿ ಈಗ, ನಾನು, ಒಬ್ಬ ಕಾಲೇಜ್ ಹುಡುಗ ಮತ್ತು ಒಬ್ಬಳು ಟಿ-ಶರ್ಟ್ ಜಿನ್ಸ್ ಹಾಕಿದ ಹುಡುಗಿ, ಮೂರೇ ಜನ ಉಳಿದೆವು.

ನಾನು ನನ್ನ ವಾಚ್ ಇನ್ನೊಮ್ಮೆ ನೋಡಿಕೊಂಡೆ, ಹನ್ನೊಂದು ಇಪ್ಪತೈದು. ನನ್ನ ಪಕ್ಕ ನಿಂತಿದ್ದ ಕಾಲೇಜ್ ಹುಡುಗ ಬ್ಯಾಗ್ ಒಂದನ್ನು ಹಾಕಿಕೊಂಡು, ಕಿವಿಗೆ ಇಯರಪೋನ್ ಹಾಕಿಕೊಂಡು ಮೊಬೈಲ ಹಿಡಿದು ಏನೋ ಬಟನ್ ವತ್ತುತ್ತ ನಿಂತಿದ್ದ. ಬಹುಶ ಹಾಡು ಕೇಳುತ್ತ, ಎಸ್.ಎಮ್.ಎಸ್ ಕಳುಹಿಸುತ್ತಿದ್ದ ಅನ್ನಿಸುತ್ತದೆ. ಕೆಲವೊಮ್ಮೆ ಎಸ್.ಎಮ್.ಎಸ್ ಓದಿ ಸಣ್ಣಗೆ ನಗುತ್ತಿದ್ದ. ಚಾಟ್ ಮಾಡುತ್ತಿದ್ದಿರಬಹುದು. ಬಿಳಿ ಬಣ್ಣದ ಟಿ-ಶರ್ಟ್, ಕಪ್ಪು ಜಿನ್ಸ್ ಹಾಕಿದ್ದ ಹುಡುಗಿ ನಮ್ಮಿಂದ ಸ್ವಲ್ಪ ದೂರದಲ್ಲಿ, ನಿಲ್ದಾಣದ ಕೊನೆಯಲ್ಲಿ ನಿಂತಿದ್ದಳು. ಆಕೆ ತಲೆ ಮೇಲೆ ಶಾಲ್ ಒಂದನ್ನು ಹಾಕಿ ಕುತ್ತಿಗೆಗೆ ಒಂದು ಸುತ್ತು ಸುತ್ತಿ ಇಳಿ ಬಿಟ್ಟಿದ್ದಳು, ಬಲ ಗೈಯಲ್ಲಿ ಕಪ್ಪು ಬಣ್ಣದ ಸಣ್ಣ ಪರ್ಸ್ ಮತ್ತು ಎಡ ಗೈಯಲ್ಲಿ ಹಳೆಯ ನೋಕಿಯ ಮೊಬೈಲ್ ಒಂದು ಇತ್ತು. ಸ್ವಲ್ಪ ಗಡಿಬಿಡಿಯಲ್ಲಿ ಇದ್ದಳೋ ಅಥವಾ ಕಸಿವಿಸಿಯಲ್ಲಿ ಇದ್ದಳೋ ತಿಳಿಯಲಿಲ್ಲ, ಅಂತೂ ತನ್ನ ಪಾಡಿಗೆ ತಾನು ಬಲಗಡೆ ಅವಾಗಾವಾಗ ಅದೇನೋ ಇಣುಕಿ ಇಣುಕಿ ನೋಡುತ್ತಿದ್ದಳು. ಬಹುಶ ಇವಳು ಹತ್ತುವ ಬಸ್ ಇನ್ನೂ ಬಂದಿಲ್ಲವೇನೋ ಅಂದುಕೊಂಡೆ. ಆಗ ಫ್ಯಾಮಿಲಿಯೊಂದು ಅಟೋ ದಲ್ಲಿ ಬಂದು ನಾವಿದ್ದ ಬಸ್ ನಿಲ್ದಾಣದೆದುರು ಇಳಿದರು. ತಾಯಿ ಮತ್ತು ಸುಮಾರು ೧೫ ವರ್ಷದ ಮಗ ಬಂದು ನನ್ನ ಪಕ್ಕದ ಬೆಂಚ್ ಮೇಲೆ ಕುಳಿತರು, ಗಂಡಸು ಆಟೋದವನಿಗೆ ದುಡ್ಡು ಕೊಟ್ಟು, ಚಿಲ್ಲರೆಯನ್ನು ಕಿಸೆಗೆ ಹಾಕಿಕೊಂಡು ಬಂದು ನನ್ನ ಬೆಂಚಿನಲ್ಲಿ ನನ್ನ ಪಕ್ಕ ಕುಳಿತುಕೊಂಡ.
ಅಷ್ಟರಲ್ಲಿ ಹೆಬ್ಬಾಳಕ್ಕೆ ಹೋಗುವ ವೋಲ್ವೋ ಬಸ್ಸೊಂದು ಬಂದು ನಿಂತಿತು, ನನ್ನ ಪಕ್ಕದಲ್ಲಿದ್ದ ಕಾಲೇಜು ಹುಡುಗ ಅದನ್ನು ಹತ್ತಿದ. ಎಲಾ ಇವನ, ಇದರ ಮೊದಲು ಬಂದಿದ್ದೂ ಹೆಬ್ಬಾಳ ಬಸ್ಸೇ ತಾನೇ, ಅದನ್ನು ಹತ್ತಲಿಲ್ಲ, ಈತ ವೋಲ್ವೋ ಬಸ್ ಮಾತ್ರ ಹತ್ತುವುದೋ, ಸಾಧಾರಣ ಬಸ್ ಕಣ್ಣಿಗೆ ಕಾಣೋಲ್ಲ ಬಹುಶ. ಹಾಂ, ಸ್ವತ ದುಡಿದು ತಿನ್ನೋ ತನಕ ದುಡ್ಡಿನ ಮಹತ್ವ ಗೊತ್ತಾಗಲ್ಲ ಮರಿ ನಿನಗೆ, ಅಂದುಕೊಂಡೆ. ಆ ತಾಯಿಯ ಪಕ್ಕ ಕುಳಿತಿದ್ದ ಹುಡುಗ, "ಅಪ್ಪ, ಈ ಬಸ್ ಅಗರ ಹೋಯ್ತದೆ" ಅಂದ. ಅದಿಕ್ಕೆ ನನ್ನ ಪಕ್ಕ ಕುಳಿತಿದ್ದ ಅವನ ತಂದೆ, "ಸುಮ್ನೆ ಕೂತ್ಕ, ಈ ವೋಲ್ವೋ ಬಸ್ನಾಗೆ ಅಗರಕ್ಕೆ ಒಬ್ಬೊಬ್ರಿಗೆ ಮಿನಿಮುಮ್ ಚಾರ್ಜ್ ೧೦ ರೂಪಾಯಿ ತಗಂತರೆ" ಅಂದ. ಹುಡುಗ ಸುಮ್ಮನಾದ. ಓಹೋ ಈ ಫ್ಯಾಮಿಲಿ ಕೂಡ ಅಗರಕ್ಕೆ ಹೋಗುವವರೋ, ಪರ್ವಾಗಿಲ್ಲ ಈ ಅಪ್ಪ ಚೆನ್ನಾಗೆ ಕ್ಯಾಲ್ಕುಲೆಶನ್ ಮಾಡಿದ್ದಾನೆ ಅಂದುಕೊಂಡೆ. ಆಮೇಲೆ ಹೊಳೆಯಿತು, ಈತ ಇಲ್ಲಿಯ ತನಕ ಆಟೋ ದಲ್ಲಿ ಬಂದವನು, ಅಗರಕ್ಕೆ ಹೋಗಲು ಇಲ್ಲಿ ಬಸ್-ನಿಲ್ದಾಣಕ್ಕೆ ಯಾಕೆ ಬಂದ. ಇಲ್ಲಿಂದ ಅಗರ ೨ ಕಿಲೋಮೀಟರ್, ಸಾಮಾನ್ಯ ಬಸ್ಸಿನಲ್ಲಿ ಒಬ್ಬೊಬ್ಬರಿಗೆ ೪ ರೂ. ಚಾರ್ಜ್ ಮಾಡುತ್ತಾರೆ, ಇವರು ೩ ಜನ ಇದ್ದಾರೆ, ಅಂದ್ರೆ ೧೨ ರೂ. ಆಯಿತು. ಅದೇ ೧೨ ರೂ. ಆಟೋದವನಿಗೆ ಕೊಟ್ಟಿದ್ರೆ ಆರಾಮವಾಗಿ ಆಟೋದಲ್ಲೇ ೩ರೂ ಜನ ಅಗರಕ್ಕೆ ಹೋಗಬಹುದಿತ್ತಲ್ಲ. ಇರಲಿ, ಆದ್ರೂ ಪರವಾಗಿಲ್ಲ ಮನುಷ್ಯ, ತನ್ನ ಮಗನಿಗೆ ಕೂಡ ಹಣದ ಮಹತ್ವ ಕಲಿಸುತ್ತಿದ್ದಾನೆ. ಆದರೆ ಆ ಹುಡುಗಿ ಕೂಡ ಆ ವೋಲ್ವೋ ಬಸ್ ಹತ್ತಲಿಲ್ಲ. ಬಸ್ ಹೊರಟು ಹೋಯಿತು. ಇವಳು ಯಾವ ಬಸ್ ಗೋಸ್ಕರ ಕಾಯುತ್ತಿದ್ದಾಳೆ ಹಾಗಾದರೆ.

ಅಷ್ಟರಲ್ಲಿ ಇನ್ನಿಬ್ಬರು ಗಂಡ ಹೆಂಡತಿ ನಡೆದು ಬಸ್ ನಿಲ್ದಾಣಕ್ಕೆ ಬಂದರು. ಬಂದವರೇ, ಅಲ್ಲೇ ಕುಳಿತಿದ್ದ ಫ್ಯಾಮಿಲಿ ನೋಡಿ, ಆ ಹೆಂಗಸು "ನೋಡ್ರಿ, ಸಾವಿತ್ರಕ್ಕ ಗಣೇಶಣ್ಣ ಇನ್ನೂ ಇಲ್ಲೇ ಅವ್ರೆ" ಎಂದು ಗಂಡನಿಗೆ ಹೇಳುತ್ತಾ, ಈ ಹೆಂಗಸಿನ ಮುಖ ನೋಡಿ ನಕ್ಕಳು. ಅದಕ್ಕೆ ಪ್ರತಿಯಾಗಿ ಈ ಕುಳಿತಿದ್ದ ಹೆಂಗಸೂ ಅವಳ ಮುಖ ನೋಡಿ ನಕ್ಕಳು. ಆ ವೋಲ್ವೋ ಬಸ್ಸು ಹೋಗಿ ಇನ್ನೊಂದು ಬಸ್ಸು ಬರಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರಿಂದ ಈ ಹೆಂಗಸರ ಮಾತು ನಾನೂ ಕೇಳಬೇಕಾಯ್ತು. ಈ ಬಿ.ಎಮ್.ಟಿ.ಸಿ ಬಸ್ ಗಳೇ ಹಾಗೆ, ಬಂದರೆ ಎಲ್ಲಾ ಒಟ್ಟಿಗೆ ಬರುತ್ತವೆ, ಜನರಿಗೆ ಯಾವುದು ಹತ್ತುವುದು ಅನ್ನೋದೇ ಒಂದು ಟೆನ್ಶನ್. ಬರದಿದ್ರೆ ಒಂದು ಗಂಟೆ ತನಕ ಯಾವುದೂ ಬರೋಲ್ಲ. ನನ್ನ ಅದ್ರಷ್ಟವೋ ದುರಾದ್ರಷ್ಟವೋ ಮುಂದಿನ ಬಸ್ ಬರುವುದು ವಿಳಂಬವಾಯ್ತು, ಇತ್ತ ಹೆಂಗಸರ ಪಟಾಕಿ ಶುರುವಾಯ್ತು. ಹುಡುಗರ ಬಾಯಲ್ಲಿ ಚೂಯಿಂಗ್ ಗಮ್ಮು, ಹುಡುಗಿಯರ ಬಾಯಲ್ಲಿ ಮಾತು, ಎರಡೂ ಒಂದೇ; ಇಬ್ಬರೂ ಅಗಿದು ಅಗಿದು ಉಗಿಯುವುದೊಂದೇ. ಹೊಸತಾಗಿ ಬಂದ ಹೆಂಗಸೇ ಮೊದಲು ಮಾತು ಶುರು ಮಾಡಿದಳು,
ಹೊಸ ಹೆಂಗಸು "ಬಸ್ಸಿಗೆ ಕಾಯ್ತಾ ಇದ್ರಾ ಸಾವಿತ್ರಕ್ಕ?" ಅಂದಳು.
ಅಪ್ಪಾ, ದೇವ್ರೇ, ಎಂತಾ ಪ್ರಶ್ನೆ ಕೇಳಿದ್ಯೇ ತಾಯಿ, ಬಸ್-ಸ್ಟ್ಯಾಂಡ್ ನಲ್ಲಿ ಬಸ್ಸಿಗೆ ಕಾಯದೆ ಮತ್ತಿನ್ನೇನು ರೈಲಿಗೆ ಕಾಯ್ತಾರ?  ಈ ಹೆಂಗಸಿಗೆ ಒಂದು ನೊಬೆಲ್ ಪ್ರಶಸ್ತಿ ಕೊಡಿಸುವುದು ಉತ್ತಮ. ಹಲವು ಕಡೆ ನೋಡಿದ್ದೀನಿ, ದೇವಸ್ತಾನಕ್ಕೆ ಹೋದ್ರೆ ಪರಿಚಯದವರು ಸಿಕ್ಕಿ ಕೇಳುವುದು, 'ದೇವರ ದರ್ಶನಕ್ಕೆ ಬಂದ್ಯನೋ?', ಇಲ್ಲಾ ಸ್ವಾಮಿ ನಿಮ್ಮನ್ನ ನೋಡೋಣ ಅಂತಾ ಬಂದೆ. ಔಷಧಿ ಅಂಗಡಿಗೆ ಹೋದ್ರೆ 'ಮೆಡಿಸಿನ್ ತಗಳೋಕೆ ಬಂದ್ಯಾ?'; ಇಲ್ಲಾ ೧ ಕೆಜೀ ಆಪಲ್ ತಗಳೋಣ ಅಂತಾ ಬಂದೆ. ಇನ್ನು ನಮ್ಮ ಊರಕಡೆ ಒಂದು ಮಾತಿದೆ, ಯಾರದ್ದಾದ್ರೂ ಮನೆಗೆ ಹೋದ್ರೆ, 'ಈಗ ಬಂದ್ಯನೋ?, ಬಾ, ಕೂತ್ಕ'; ಇಲ್ಲಾ ಆಗಲೇ ಒಂದು ಗಂಟೆ ಮೊದಲೇ ಬಂದಿದ್ದೆ, ನಿಮ್ಮ ಮನೆ ಗೇಟಲ್ಲಿ ನಿಂತು ಒಳಗೆ ಬರಬೇಕೋ ಬ್ಯಾಡವೋ ಅಂತಾ ಯೋಚಿಸ್ತ ಇದ್ದೆ. ಎಂತಾ ಅಸಂಬದ್ದ ಪ್ರಶ್ನೆಗಳಿವು.
ಅದಿರಲಿ, ಅವಳ ಪ್ರಶ್ನೆಗೆ ಕುಳಿತಿದ್ದ ಹೆಂಗಸು,
"ಹೌದೆ ಕಾವೇರಿ, ಒಂದ್ ಬಸ್ಸು ಕಾಣುಕಿಲ್ಲ. ಉರಿ ಬಿಸ್ಲು, ಯಪ್ಪಾ" ಅಂದಳು.
ಹೊಸ ಹೆಂಗಸು "ಹೌದು, ಸೆಕೆ ಸುರು ಆಯ್ತು." ಎಂದು ಕೈ ಬೀಸಿ ಗಾಳಿ ಹಾಕಿಕೊಂಡಳು. ಪುನ ಅವಳೇ ಮಾತು ಮುಂದುವರಿಸಿದಳು,
"ಎಂತಾ ಹೇಳ್ತೇ ದೇವ್ರು?" ಅಂದಳು.
ಈಗ ಆಶ್ಚರ್ಯ ಪಡುವ ಸಂಗತಿ ನನ್ನದು. ದೇವರೆಲ್ಲ ಮಾತನಾಡಲು ಶುರುಮಾಡಿದವೇ? ಇವರಹತ್ರ ದೇವರು ಬಂದು ಏನೋ ಹೇಳಿದವೇ? ನನ್ನ ಕಿವಿ ಚುರುಕಾಯಿತು, ಮುಂದಿನ ಮಾತು ಕೇಳಲು.
ಕುಳಿತಿದ್ದ ಹೆಂಗಸು "ಬಲಗಡೆ ಹೂ ಕೊಟ್ಟದ್ಯೇ, ಇನ್ನು ಏನ್ ಆಯ್ತದೆ ನೋಡ್ಬೇಕು. ಸುಮಾರ್ ಹೊತ್ತು ಕಾಯ್ಸ್ತ ಇತ್ತು ದೇವ್ರು, ಕೊನಿಗ್ ಬಟ್ರು ೩ ಸುತ್ತು ಹಾಕ್ಕಂಡಿ ಬನ್ನಿ, ಅಷ್ಟರಾಗೆ ಪರಸಾದ ಆಯ್ತದೆ ಅಂದ್ರು. ಕೊನಿಗೂ ಬಲಬದಿದೆ ಕೊಟ್ಟದೆ."
ನನಗೆ ಅರ್ಥವಾಯಿತು, ಇದು ದೇವರಲ್ಲಿ ಪ್ರಸಾದ ಕೇಳುವ ನಂಬಿಕೆ. ನಮ್ಮ ಊರಿನ ಹತ್ತಿರದ ಒಂದು ದೇವಸ್ತಾನದಲ್ಲಿ ಇದನ್ನು ನೋಡಿದ್ದೆ. ಅಲ್ಲಿಯ ಜನ ದೇವರಲ್ಲಿ ಒಬ್ಬೊಬ್ಬರೇ ಬಂದು ದೇವರೊಂದಿಗೆ ಮಾತನಾಡುತ್ತಾರೆ. ತಾವು ಕೇಳಿಕೊಂಡ ಕೆಲಸ ನಡೆಯುವುದಾದರೆ ಬಲಗಡೆಯ ಹೂವನ್ನು ಕೊಡೆಂದೂ, ಇಲ್ಲದಿದ್ದಲ್ಲಿ ಎಡಗಡೆಯ ಹೂವನ್ನು ಕೊಡೆಂದು ಕೇಳಿಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ/ಅಥವಾ ಸ್ವಲ್ಪ ವಿಳಂಬವಾಗಿಯಾದರೂ ದೇವರ ಎಡ ಅಥವಾ ಬಲದಿಂದ ಹೂವು ಬೀಳುತ್ತದೆ. ಇದರಿಂದ ಜನ ಖುಷಿಯಾಗುತ್ತಾರೆ. ನಾನು ಇದರಬಗ್ಗೆ ಏನೂ ಹೇಳಲು ಇಷ್ಟ ಪಡುವುದಿಲ್ಲ. ಇದು ಅವರವರ ವಯಕ್ತಿಕ ವಿಷಯ, ಇದರಿಂದ ಆ ಜನರಿಗೆ ನೆಮ್ಮದಿ ದೊರೆಯುತ್ತದೆ, ಅವರು ವರ್ಷಗಳಿಂದ ಪೂಜಿಸುತ್ತಿರುವ ದೇವರ ಮೇಲೆ ಅವರ ಭಕ್ತಿ ಭಾವನೆಗಳು ಹೆಚ್ಚಾಗುತ್ತವೆ. ಬಹುಶಃ ಅವರ ದೇವರ ಮೇಲಿನ ಅಘಾಧ ನಂಬಿಕೆಯೇ ಅವರಿಗೆ ಶ್ರೀರಕ್ಷೆ.

ಅಷ್ಟರಲ್ಲಿ, ಅಲ್ಲಿ ನಿಂತಿದ್ದ ಜಿನ್ಸ್ ಪ್ಯಾಂಟ್ ಹುಡುಗಿಯ ಎದುರು ಒಂದು ಕಪ್ಪು ಪಲ್ಸಾರ್ ಬೈಕ್ ಬಂದು ನಿಂತಿತು. ಆಗಲೇ ನನಗೆ ಗೊತ್ತಾದದ್ದು, ಇದು ಗರ್ಲ್-ಫ್ರೆಂಡ್ ಗಿರಾಕಿ. ಬಂದವನೇ ಹೆಲ್ಮೆಟ್ ತೆಗೆದ, ಕೈಯಲ್ಲಿ ಕೂದಲು ಬಾಚಿಕೊಂಡ. ಆ ಹುಡುಗಿ "ಹವ್ ಮಚ್ ಟೈಮ್ ಐ ಹ್ಯಾವ್ ಟು ವೈಟ್" ಅಂದಳು. ಓಹೋ ಇದು ಇಂಗ್ಲಿಷ ಗಿರಾಕಿ ಕೂಡ. ಅದಕ್ಕೆ ಅವನು ಏನೋ ಅಂದ ಸರಿಯಾಗಿ ಕೇಳಿಸಲಿಲ್ಲ. ಅದಕ್ಕೆ ಅವಳು ತನ್ನ ಪರ್ಸ್ ನಿಂದ ಅವನ ಭುಜಕ್ಕೆ ಮೊಟಕಿದಳು. ಅವನ ಡ್ರೆಸ್ಸಿಂಗೋ, ಅವನ ಮುಸುಡಿಯ ಮೇಲಿನ ಫ್ರೆಂಚ್ ಗಡ್ದವೋ. ಇವಳೋ ಸ್ವಲ್ಪ ಚೆನ್ನಾಗೇ ಇದಾಳೆ, ಆದರೆ ಎಂತಾ ಟೇಸ್ಟ್. ಅಪ್ಪಾ ಶಿವಾ ನಿನ್ನ ಮಾಯೆಗೆ ಒಂದು ಸಾಷ್ಟಾಂಗ ನಮಸ್ಕಾರ. ನಿಜಾ ಒಂದು ಹಾಡು ಜ್ಞಾಪಕಕ್ಕೆ ಬಂತು,
ಕುಂಬಳಕಾಯಿ ಬಳ್ಳಿಲಿಟ್ಟನು, ನಮ್ಮ ಶಿವ,
ನೆಲ್ಲಿಕಾಯಿ ಮರದಲ್ಲಿಟ್ಟನು,
ಕೊಡುವುದನ್ನು ಕೊಟ್ಟು, ಇಡುವುದನ್ನು ಇಟ್ಟು,
ಕಾಣದಂತೆ ಮಾಯವಾದನು...
ಬಿಡಿ ಬಿಡಿ, ಬೇರೆಯವರ ವಿಷಯ ಮಾತಾಡಬಾರದು. ಅದು ತಪ್ಪು. ಅವಳು ಬೈಕ್ ಹತ್ತಿದ್ದೆ, ಹೆಲ್ಮೆಟ್ ಹಾಕಿಕೊಂಡು ಬೈಕ್ ಬರ್ರನೆ ಬಿಟ್ಟುಕೊಂಡು ಹೊರಟು ಹೋದ.

ಇವರ ಮದ್ಯ ಅಲ್ಲಿದ್ದ ಫ್ಯಾಮಿಲಿ ಮಾತಾಡಿದ್ದು ಕೇಳಿಸಿಕೊಳ್ಳಲು ಆಗಲಿಲ್ಲ. ಕೊನೆಗೂ ಇನ್ನೊಂದು ಬಸ್ ಬಂತು, ಅವರೆಲ್ಲ ಅಲ್ಲಿಂದ ಹೊರಟು ಹೋದರು. ಎರಡು ಮೂರು ನಿಮಿಷ ಒಬ್ಬನೇ ಕುಳಿತಿದ್ದೆ. ಟೈಮ್ ನೋಡಿದೆ ಹನ್ನೆರಡೂವರೆ. ಹೊಟ್ಟೆ ಕೂಡ ಸಣ್ಣಗೆ ಚುರು ಚುರು ಅನ್ನತೊಡಗಿತು.

ಬಹುಶ ಇತರಹದ ಒಂದು ಎಕ್ಷಪೀರಿಯೆನ್ಸ್ ನನ್ನ ಲೈಫ್ ನಲ್ಲೇ ಹೊಸತು. ಏನೂ ಕೆಲಸ ಇಲ್ಲದೆ ಒಂದು ಬಸ್-ನಿಲ್ದಾಣದಲ್ಲಿ ಎರಡು ಘಂಟೆ ಸುಮ್ಮನೆ ಕುಳಿತುಕೊಳ್ಳುವುದು. ನನಗೆ ಗೊತ್ತಿಲ್ಲ, ಕೆಲವರಿಗೆ ಇದೊಂದು ಸಮಯ ವ್ಯರ್ಥ ಅನ್ನಿಸಬಹುದು, ಅಷ್ಟೆಲ್ಲ ಯಾಕೆ, ನನಗೆ ಅನ್ನಿಸುತ್ತದೆ ಕೆಲವೊಮ್ಮೆ, ನನ್ನಂತಹ ಯುವಜನರು ಎಷ್ಟೊಂದು ಸಮಯ ವ್ಯರ್ಥ ಮಾಡುತ್ತಿದ್ದೇವೆ, ಪುಸ್ತಕ ಓದುವಲ್ಲಿ, ಇಲ್ಲವೇ ಒಳ್ಳೆಯ ಕೆಲಸ ಮಾಡುವುದರಲ್ಲಿ ನಮ್ಮ ಮನಸ್ಸು ತೋರದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದೆವಲ್ಲ ಎಂದು. ಆದರೆ ಇವತ್ತು ನಾನು ಬಸ್-ನಿಲ್ದಾಣದಲ್ಲಿ ಕಳೆದ ೨ ಗಂಟೆಗಳು ಹಲವು ವಿಷಯಗಳನ್ನು ಮರಳಿ ನೆನಪಿಸಿ ಕೊಟ್ಟವು. ಅಬ್ಬಾ ನಿಜಕ್ಕೂ ಇವತ್ತು ನನಗೆ ತಿಳಿಯಿತು ಒಂದು ಸಾಧಾರಣ ಬಸ್-ನಿಲ್ದಾಣದಲ್ಲೂ ಎಂತಹ ವಿಷಯಗಳ ಕಂತೆಯೇ ಅಡಗಿದೆ ಎಂದು. ನಿಜ, ಜಗತ್ತು ತನ್ನಲ್ಲಿ ಏನೇನೋ ಅಡಗಿಸಿ ಇಟ್ಟುಕೊಂಡಿರುವುದಂತೂ ಸತ್ಯ, ನಮಗೆ ತಿಳಿದುಕೊಳ್ಳೋಕೆ ಪುರುಸೊತ್ತಿಲ್ಲ ಅಷ್ಟೇ.

ಇನ್ನೇನು ಅರ್ಧ ದಿನ ಕಳೆದವು ಮನೆಗೆ ಹೋಗಬೇಕು ಅಂದುಕೊಳ್ಳುವಷ್ಟರಲ್ಲಿ ಬಸ್-ನಿಲ್ದಾಣಕ್ಕೆ ಒಬ್ಬಳು ತಕ್ಕ ಮಟ್ಟಿಗೆ ವಯಸ್ಸಾದ ಹಿರಿಯ ಹೆಂಗಸೊಬ್ಬಳು ಬಂದು ನನ್ನ ಮುಂದೇ ನಿಂತಳು. ಇಬ್ಬರು ಯುವಕರೂ ಬಂದರು. ಅಷ್ಟರಲ್ಲಿ ಬಸ್ಸೊಂದು ಬಂತು, ಆ ಹೆಂಗಸು ನನ್ನೆಡೆ ತಿರುಗಿ, "ಮಗಾ, ಈ ಬಸ್ ಎಲ್ಲೋಯ್ತದೆ?" ಅಂದಳು, ನಾನಂದೆ "ಇದು ಮಾರತ್-ಹಳ್ಳಿ ಕಡೆ ಹೋಗುತ್ತೆ". ಅದರ ಹಿಂದೆ ಇನ್ನೊಂದು ಬಸ್ಸು ಬಂತು, ಪುನ ಕೇಳಿದಳು "ಇದೆಲ್ಲೋಯ್ತದೆ?", ನಾನಂದೆ "ಹೆಬ್ಬಾಳ ಹೋಗುತ್ತೆ". ಆಕೆ ಯಾವ ಬಸ್ಸೂ ಹತ್ತಲಿಲ್ಲ. ಒಂದೆರಡು ನಿಮಿಷದಲ್ಲಿ ಇನ್ನೊಂದು ಬಸ್ಸು ಬಂತು, ಆಕೆ ನನ್ನಲ್ಲಿ ಇನ್ನೊಮ್ಮೆ ಕೇಳಿದಳು "ಈ ಬಸ್ಸು ಎಲ್ಲೋಯ್ತದೆ?". ನಾನಂದೆ "ಅಮ್ಮಾ, ಇದೂ ಹೆಬ್ಬಾಳ ಹೋಗುತ್ತೆ; ಆದ್ರೆ ನಿಮಗೆ ಎಲ್ಲಿಗೆ ಹೋಗ್ಬೇಕು?". ಆಕೆ ಆ ಬಸ್ಸೂ ಹತ್ತಲಿಲ್ಲ, "ನಂಗೆ ಸಿಲ್ಕ್-ಬೋರ್ಡ್ ಹೋಗುದು" ಅಂದಳು. "ಅಯ್ಯೋ ಅಮ್ಮಾ, ನೀವು ಇಲ್ಲಿ ನಿಂತರೆ ನಿಮಗೆ ಇಲ್ಲಿ ಯಾವ ಸಿಲ್ಕ್-ಬೋರ್ಡ್ ಬಸ್ಸೂ ಸಿಗೊಲ್ಲ, ಇಲ್ಲಿಂದ ಸಿಲ್ಕ್-ಬೋರ್ಡ್ ಗೆ ಬಸ್ ಲಿಂಕ್ ಇಲ್ಲ. ನೀವೊಂದು ಕೆಲಸ ಮಾಡಿ, ಇಲ್ಲಿಂದ ಯಾವುದಾದರು ಬಸ್ಸು ಹತ್ತಿ ಮುಂದಿನ ಸ್ಟಾಪ್ ಅಗರದಲ್ಲಿ ಇಳ್ಕಳಿ. ಅಲ್ಲಿ ೫೦೦ ನಂಬರಿನ ಯಾವುದಾದ್ರೂ ಬಸ್ಸು ಹತ್ತಿ ಅದು ಡೈರೆಕ್ಟ್ ಸಿಲ್ಕ್-ಬೋರ್ಡ್ ಹೋಗುತ್ತೆ" ಅಂತ ಹೇಳಿ ನಾನು ನನ್ನ ಸೀಟ್ ನಿಂದ ಎದ್ದೆ. "ಇಲ್ಲಿಂದ ಯಾವ್ ಬಸ್ಸಾದ್ರೂ ಹತ್ತುದ ಅಗರಕ್ಕೆ?" ಅಂದಳು, "ಹೌದಮ್ಮ, ಇಲ್ಲಿಂದ ಮುಂದೆ ಹೋಗೋ ಎಲ್ಲಾ ಬಸ್ಸೂ ಅಗರ ಹೋಗುತ್ತೆ" ಅಂದೆ. "ಸರಿ ಮಗಾ, ನೀ ಎತ್ಲಾಗ್ ಹೋಯ್ತಿ? ಅಗರಕ್ಕ?" ಅಂದಳು. ನಾನು ಅಲ್ಲಿಂದ ಹೊರಡುತ್ತಾ ಅಂದೆ,
"ಇಲ್ಲಮ್ಮ, ಮನೆಗೆ"...