Wednesday, July 24, 2013

ವಿಕ್ರಮಾದಿತ್ಯ ಮತ್ತು ಬೇತಾಳ - ಭಾಗ೨ - ಅಗೋಚರ ಚೇಷ್ಟೆ

ಭಾಗ೧ - ಮಾಂತ್ರಿಕ ಫಲ

****
ನೀವೆಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಆ ಅಮಾವಾಸ್ಯೆಯ ದಿನ ಬಂದೇ ಬಿಟ್ಟಿತು.
ರಾಜ ವಿಕ್ರಮಾದಿತ್ಯ ತನ್ನ ಕುದುರೆಯನ್ನು ಸಿದ್ದಪಡಿಸುವಂತೆ ಸೇನಾಧಿಪತಿಗೆ ತಿಳಿಸಿದ. ಅಷ್ಟರಲ್ಲಿ, ಮಂತ್ರಿ ಭಟ್ಟಿ, ರಾಜನ ಖಾಸಗಿ ಕೋಣೆ ಪ್ರವೇಶಿಸುತ್ತ, ಏನನ್ನೋ ಹೇಳ ಬಯಸಿ, ಆದರೂ ಹೇಳಲಾಗದೆ,
"ಪ್ರಭು, ಆ ಸಾಧುವಿನ ನಡವಳಿಕೆ ನನಗೆ ಬಹಳ ಅನುಮಾನಾಸ್ಪದವಾಗಿ ಕಂಡುಬಂದಿದೆ. ಸಹಾಯ ಯಾಚಿಸಿ ಬರುವವರು ನೇರವಾಗಿ ನಮ್ಮ ರಾಜಸಭೆಯಲ್ಲಿ ಕೇಳಬಹುದು. ನಮ್ಮ ರಾಜ ಸಭೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ. ದಯಾಮಯಿಯಾದ ನಿಮ್ಮಲ್ಲಿ ಇಲ್ಲಿಯ ತನಕ ಸಹಾಯ ಕೇಳಿ ಬಂದವರು ಯಾರೂ ಬರಿಗೈಲಿ ಹಿಂದಿರುಗಿಲ್ಲ. ಇದು ಈ ರಾಜ್ಯದ ಸಣ್ಣ ಮಗುವಿಗೂ ಗೊತ್ತಿರುವ ವಿಷಯ. ಅಂತಿರುವಾಗ, ಆ ಮಾಂತ್ರಿಕ ಫಲವನ್ನು ಕಾಣಿಕೆಯಾಗಿ ಕೊಟ್ಟಂತೆ ಮಾಡಿ, ನಿಮ್ಮೊಬ್ಬರನ್ನೇ ಅರ್ಧರಾತ್ರಿ ಊರ ಹೊರಗಿನ ಆ ಘೋರ ಸ್ಮಶಾನಕ್ಕೆ ಬರುವಂತೆ ಕೇಳುವ ಅವಶ್ಯಕತೆಯಾದರೂ ಏನಿದೆ. ನನಗೆ ಇದರಲ್ಲೇನೋ ಕುತಂತ್ರ ಇರುವಂತೆ ಕಾಣುತ್ತಿದೆ. ಮಹಾರಾಜ ನಿಮ್ಮ ಸುರಕ್ಷತೆ ನನಗೆ ಬಹಳ ಮುಖ್ಯ. ನೀವು ಹೋಗುವುದು ಬೇಡ."
ವಿಕ್ರಮ, ಭಟ್ಟಿಯತ್ತ ತಿರುಗಿ,"ಭಟ್ಟಿ, ಮೊದಮೊದಲು ಸಾಧುವಿನ ವರ್ತನೆ ನನಗೂ ಅನುಮಾನಾಸ್ಪದವಾಗಿ ಕಂಡರೂ, ಆತನ ವರ್ತನೆ ಹೊಸತೊಂದರ ತಿಳುವಳಿಕೆ ನಮ್ಮಲ್ಲಿ ತಂದಿದೆ. ಅಸ್ಟೇ ಅಲ್ಲದೇ, ನನ್ನ ಒಬ್ಬನ ಸುರಕ್ಷತೆ ನಾನು ಮಾಡಿಕೊಳ್ಳಬಲ್ಲೆ. ಗಾಂಧರ್ವಸೇನನ ಮಗನಾದ ನಾನು ಒಬ್ಬ ಸಾಧುವಿನ ಕೋರಿಕೆ ಇಡೆರಿಸಲಾರದೆ ಸೋತೆ ಎಂಬ ಮಾತು ಕೇಳಿಬರಬಾರದು."
ಭಟ್ಟಿ ಮರು ಉತ್ತರಿಸುತ್ತ, "ಮಹಾರಾಜಾ, ಈಗಲೂ ನನ್ನ ಮನಸ್ಸಿಗೆ ಸಮಾಧಾನ ಸಿಗುತ್ತಿಲ್ಲ, ನಿಮ್ಮನ್ನು ಒಬ್ಬರೇ ಹೋಗಬಿಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನನಗೂ ನಿಮ್ಮೊಂದಿಗೆ ಬರಲು ಅವಕಾಶ ಮಾಡಿಕೊಡಿ. ನಾನು ಸ್ವಲ್ಪ ದೂರದಲ್ಲಿ, ಯಾರಿಗೂ ಕಾಣದಂತೆ ನಿಮ್ಮನ್ನು ಹಿಂಬಾಲಿಸುತ್ತೇನೆ" ಎಂದ.
ಅದಕ್ಕೆ ವಿಕ್ರಮಾದಿತ್ಯ ಮುಗುಳ್ನಕ್ಕು, "ಭಟ್ಟಿ, ನಿನ್ನ ಅಭಿಮಾನಕ್ಕೆ ನಾನು ನಿಜಕ್ಕೂ ಕೃತಜ್ಞ. ಆದರೆ ನಾನು ಒಬ್ಬನೇ ಬರುವುದಾಗಿ ಸಾಧುವಿಗೆ ಮಾತು ಕೊಟ್ಟಿದ್ದೇನೆ. ನನ್ನ ಮಾತು ನಾನು ಉಳಿಸಿಕೊಳ್ಳಲೇ ಬೇಕು. ಹಾಗಾಗಿ ನಾನು ಒಬ್ಬನೇ ಹೋಗುವುದಾಗಿ ನಿರ್ಧಾರ ಮಾಡಿ ಬಿಟ್ಟಿದ್ದೇನೆ. ಈ ವಿಷಯದಲ್ಲಿ ನನ್ನ ನಿರ್ಧಾರ ಬದಲಾಯಿಸಲಾರೆ".
ಕೊನೆಗೂ ಭಟ್ಟಿ ಬೇರೆ ದಾರಿ ಕಾಣದೆ, "ಅಂತಿದ್ದಲ್ಲಿ ಮಹಾರಾಜ, ನೀವು ನನ್ನ ಎರಡು ಸಣ್ಣ ಕೋರಿಕೆಗಳನ್ನು ಒಪ್ಪಿಕೊಳ್ಳಲೇ ಬೇಕು. ಮೊದಲಿನದು, ಊರ ಹೊರಗಿನವರೆಗೆ ನಾನು ಮತ್ತು ನಮ್ಮ ಭಟರು ನಿಮ್ಮನ್ನು ಹಿಂಬಾಲಿಸಿ ಬರುತ್ತೇವೆ, ನೀವು ಊರಲ್ಲಿ ಇರುವವರೆಗೂ ನಿಮ್ಮ ಸುರಕ್ಷತೆ ನಮ್ಮ ಹೊಣೆ. ನೀವು ನಮ್ಮ ಕಣ್ಣಳತೆಯ ಹೊರಗೆ ಹೋಗುವ ವರೆಗೂ ನಾವಲ್ಲಿಯೇ ಕಾದು ನಂತರ ಹಿಂದಿರುಗುತ್ತೇವೆ. ಎರಡನೆಯದು, ನೀವು ಶಸ್ತ್ರಧಾರಿಯಾಗಿಯೇ ಅಲ್ಲಿಗೆ ಹೋಗಬೇಕು, ಯಾವುದೇ ಕಾರಣಕ್ಕೂ, ಎಂತಹ ಸಂದರ್ಭ ಬಂದರೂ ನಿಮ್ಮ ಖಡ್ಗವನ್ನು ಕೆಳಗಿಡಬಾರದು."
ವಿಕ್ರಮಾದಿತ್ಯ ಅದಕ್ಕೆ ಒಪ್ಪಿಗೆ ಸೂಚಿಸಿ, "ಅಂತೆಯೇ ಆಗಲಿ ಭಟ್ಟಿ. ಖಂಡಿತಾ ನಿನ್ನೆರಡು ಕೋರಿಕೆಗಳು ಈಡೆರಲಿವೆ. ನಮ್ಮೊಂದಿಗೆ ಬರಲು ಸಿದ್ದತೆ ನಡೆಸು" ಎಂದ.

ಭಟ್ಟಿ, ಏನೋ ಯೋಚನೆ ಹೊಳೆದಂತೆ ಮಾಡಿ, ಮಹಾರಾಜನಿಗೆ ವಂದಿಸಿ, ಹೊರ ಹೋದ.
ಭಟ್ಟಿ ಅಲ್ಲಿಂದ ಹೋದ ನಂತರ ವಿಕ್ರಮಾದಿತ್ಯ ತನ್ನ ಗುಪ್ತ ಕತ್ತಿಯನ್ನು ತಾನು ಧರಿಸದಿದ್ದದ್ದು ನೆನಪಾಗಿ ಅದನ್ನು ಕೂಡಲೆ ಅಂಗ ಪರಿಚಾರಕನಿಂದ ತರಿಸಿ, ಸೂಪ್ತವಾದ ಜಾಗದಲ್ಲಿ ಸುರಕ್ಷಿತವಾಗಿ ಇರಿಸಿಕೊಂಡ.

ರಾಜನ ಕೋಣೆಯಿಂದ ಹೊರನಡೆದ ಭಟ್ಟಿ, ನೇರ ವೇತಾಳಭದ್ರನ ಬಳಿ ಹೋದ. ವೇತಾಳಭದ್ರ, ಮಂತ್ರ ವಿದ್ಯೆ ತಂತ್ರ ವಿದ್ಯೆಯಲ್ಲಿ ಅಸಾಮಾನ್ಯನಾಗಿದ್ದು, ವಿಕ್ರಮನ ರಾಜ್ಯದ ನವರತ್ನಗಳಲ್ಲಿ ಒಬ್ಬನೆಂದೇ ಪ್ರಸಿದ್ದಿ ಪಡೆದವನು. ಮಂತ್ರಿ ಭಟ್ಟಿಯ ಕಳೆಗುಂದಿದ ಮುಖದ ಚರ್ಯೆ ನೋಡುತ್ತಲೆ ವೇತಾಳಭದ್ರ ಹೂಂಕರಿಸುವ ದ್ವನಿಯಲ್ಲಿ, "ಮಹಾರಾಜರು ತಮ್ಮೊಂದಿಗೆ ಬರಲು ಒಪ್ಪಿಗೆ ಕೊಡಲಿಲ್ಲವೇ ಭಟ್ಟಿ? ಈ ಅಮಾವಾಸ್ಯೆಯ ರಾತ್ರಿಯಲ್ಲಿ ನಡೆಯುವ ನರಬಲಿಯನ್ನು ಯಾರೂ ತಡೆಯಲಾಗದು. ತಾಯಿ ಕಾಳಿಮಾತೆಯ ದಾಹ ಇವತ್ತಿಗೆ ತೀರಲೇಬೇಕು. ನರಬಲಿ ಶತಸಿದ್ದ" ಎಂದ.
ಬೆಚ್ಚಿಬಿದ್ದ ಭಟ್ಟಿ, "ವೇತಾಳಭದ್ರರೇ, ಈ ಅನಾಹುತವನ್ನು ತಪ್ಪಿಸಲು ನನಗೆ ನಿಮ್ಮ ನೆರವು ಬೇಕು. ನನ್ನ ಜೀವ ಹೋದರೂ ಚಿಂತೆಯಿಲ್ಲ, ಮಹಾರಾಜರ ರಕ್ಷಣೆ ಮಾಡುತ್ತೇನೆ. ಈ ಅನಾಹುತ ಆಗದಂತೆ ತಡೆಯಿರಿ. ನನ್ನ ಪರಿಧಿ ಮಹಾರಾಜರು ಊರ ಹೊರಗೆ ಕಾಲಿಡುವವರೆಗೆ ಮಾತ್ರ. ಮಹಾರಾಜರನ್ನು ನಾನು ದೂರದಿಂದ ಹಿಂಬಾಲಿಸಲೂ ನನಗೆ ಅವಕಾಶವಿಲ್ಲ. ನನಗೆ ದಿಕ್ಕೇ ತೋಚದಂತಾಗಿದೆ. ನೀವು ಇದಕ್ಕೆ ಪರಿಹಾರ ಹುಡುಕಲೇ ಬೇಕು. ಮಹಾರಾಜರ ಜೀವಕ್ಕೆ ಅಪಾಯವಾಗದಂತೆ ತಡೆಯಬೇಕು" ಎಂದ.
ವೇತಾಳಭದ್ರ ಸ್ವಲ್ಪ ಶಾಂತನಾಗಿ, "ಭಟ್ಟಿ, ಈ ವಿಷಯದಲ್ಲಿ ನನ್ನ ಯಾವ ವಿದ್ಯೆಯೂ ಸಹಾಯಕ್ಕೆ ಬರಲಾರದು. ಇದು ಕಾಳಿಮಾತೆಯ ಆಣತಿಯಂತೆ ನಡೆಯುತ್ತಿರುವ ಕಾರ್ಯ. ನಮ್ಮಲ್ಲಿ ಯಾರಿಗೂ ಇದರ ವಿರುದ್ದ ನಡೆಯುವ ಶಕ್ತಿ ಇಲ್ಲ. ಈಗ ನಮಗಿರುವುದು ಒಂದೇ ದಾರಿ, ಆ ಜಗನ್ಮಾತೆಯನ್ನು ಮನಸಾರೆ ವೊಲಿಸಿ ಮೆಚ್ಚಿಸಲು ಪ್ರಯತ್ನಿಸುವುದು. ಬಹುಶ, ಆಗುವ ಅನಾಹುತದ ಪರಿಮಾಣ ಕಡಿಮೆ ಆಗಬಹುದೇನೋ. ನಾನು ಮಹಾರಾಜರಿಗೋಸ್ಕರ ಕಾಳಿಮಾತೆಯ ಪೂಜೆ ಮಾಡುತ್ತೇನೆ. ನೀನು ಮಹಾರಾಜರೊಂದಿಗಿದ್ದು ನಿನ್ನ ಪರಿಧಿಯವರೆಗೆ ಅವರ ಸಂಪೂರ್ಣ ರಕ್ಷಣೆ ಮಾಡು. ಹೊರಡು" ಎಂದ.
ಭಟ್ಟಿ, ವೇತಾಳಭದ್ರನಿಗೆ ನಮಿಸಿ ಪ್ರಯಾಣದ ತಯ್ಯಾರಿ ನಡೆಸಲು ಲಗುಬಗನೆ ಅಲ್ಲಿಂದ ಹೊರಟ.
***

ಅಂದು ಸಂಜೆ ಗೋಧೂಳಿಯ ಸಮಯ, ಪ್ರಾಣಿ ಪಕ್ಷಿಗಳೆಲ್ಲ ಇನ್ನೂ ಸ್ವಚ್ಚಂದವಾಗಿ ಹಾರಾಡುತ್ತ, ಗೂಡು ಸೇರುವ ತಯ್ಯಾರಿ ನಡೆಸುತ್ತಿದ್ದವು. ರಾಜ ವಿಕ್ರಮ ತನ್ನ ಮಂತ್ರಿ ಭಟ್ಟಿ ಹಾಗು ಸಣ್ಣ ಸೇನಾ ತುಕಡಿಯೊಂದಿಗೆ ರಾಜಭವನದಿಂದ ಹೊರಬೀಳುತ್ತಿದ್ದಂತೆ, ಮಳೆಗಾಳವಲ್ಲದಿದ್ದರೂ ಇದ್ದಕ್ಕಿದ್ದಂತೆ ಮುಗಿಲು ಕಪ್ಪಿಟ್ಟಿತು. ಕಾರ್ಮೋಡ ಕವಿದ ರೀತಿಗೆ ಪಶು ಪಕ್ಷಿಗಳೆಲ್ಲ ರಾತ್ರಿಯಾಯಿತೆಂಬಂತೆ ಕಂಗೆಟ್ಟು ಅತ್ತಿತ್ತ ಓಡ ತೊಡಗಿದವು. ರಾಜ ಒಮ್ಮೆ ತನ್ನ ಕುದುರೆಯನ್ನು ನಿಲ್ಲಿಸಿ ಆಕಾಶದತ್ತ ದಿಟ್ಟಿಸಿ ಸಣ್ಣ ಮುಗುಳ್ನಗು ಬೀರಿದ. ಮಂತ್ರಿ ಭಟ್ಟಿ ಇದ್ದಕ್ಕಿದ್ದಂತೆ ವಾತಾವರಣದಲ್ಲಾದ ಬದಲಾವಣೆಗೆ ಇನ್ನಷ್ಟು ಕಂಗೆಟ್ಟ. ಮಹಾರಾಜನೆಡೆಗೆ ನೋಡಿದರೆ, ಆತ ಏನೂ ಆಗಿಲ್ಲವೆಂಬಂತೆ ನಿರಾಳವಾಗಿ ಮುನ್ನಡೆಯುತ್ತಿರುವುದು ನೋಡಿ ಭಟ್ಟಿಯ ದುಗುಡ ಇನ್ನಷ್ಟು ಹೆಚ್ಚಾಯ್ತು.
ಪ್ರಯಾಣ ಮುಂದುವರಿಯುತ್ತಿದ್ದಂತೆ, ಹಟಾತ್ ಹೊಡೆದ ಸಿಡಿಲಿಗೆ ಸುಮಾರು ಇಪ್ಪತ್ತು ಫರ್ಲಾಂಗ್ ದೂರದಲ್ಲಿ ಮರವೊಂದು ಧೊಪ್ಪನೆ ಉರುಳಿ ಬಿದ್ದು ಹೊತ್ತಿ ಧಗ ಧಗನೆ ಉರಿಯತೊಡಗಿತು. ಮಂತ್ರಿ, ಮಹಾರಾಜನನ್ನು ಬಳಸಿ ಆತನ ಮುಂದೆ ಬಂದು ನಿಂತು, ಮಹಾರಾಜನನ್ನು ಹೋಗದಂತೆ ತಡೆದ.
ಮಂತ್ರಿ, ಮಹಾರಾಜ ಕಡೆ ತಿರುಗಿ, "ಪ್ರಭು, ನಿಲ್ಲಿ, ಇಲ್ಲಿಂದ ಮುಂದೆ ಹೋಗಬೇಡಿ. ಎಲ್ಲಾ ರೀತಿಯಲ್ಲೂ ಅಪಶಕುನಗಳು ನಡೆಯುತ್ತಿವೆ. ನನ್ನ ಆತಂಕ ಹೆಜ್ಜೆ ಹೆಜ್ಜೆಗೂ ಹೆಚ್ಚಾಗುತ್ತಿದೆ. ನಾವು ವಾಪಸ್ಸಾಗೋಣ" ಎಂದ.
ಅದಕ್ಕೆ ವಿಕ್ರಮ ಮುಗುಳ್ನಕ್ಕು "ಭಟ್ಟಿ, ಯಾರೋ ನನ್ನ ಆಗಮನವನ್ನು ಆತುರದಿಂದ ನಿರೀಕ್ಷಿಸುತ್ತಿದ್ದಾರೆ. ನನ್ನ ಧೈರ್ಯದ ಪರೀಕ್ಷೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಇವೆಲ್ಲ ಅವರದ್ದೇ ಕೆಲಸ. ಬಹುಶಃ ನಿನ್ನನ್ನು ನನ್ನೊಂದಿಗೆ ಅವರು ನಿರಿಕ್ಷಿಸಿಲ್ಲ ಎನ್ನಿಸುತ್ತದೆ. ಅದಕ್ಕೇ ಇವೆಲ್ಲಾ ರೀತಿಯಲ್ಲಿ ನಿನ್ನ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಮಾಡುವ ಕೆಲಸದ ಪೂರ್ವದಲ್ಲಿ ಅಪಶಕುನಗಳು ಕಂಡುಬಂದಲ್ಲಿ, ಆಕೆಲಸ ಉತ್ತಮ ಕೆಲಸವೆಂದೇ ಅರ್ಥ. ನೀನೆ ಹೇಳಿದ್ದೆಯಲ್ಲವೇ, ಒಂದು ಒಳ್ಳೆಯ ಕೆಲಸ ಮಾಡುವ ಮೊದಲು ನೂರಾರು ವಿಘ್ನಗಳು ಕಾಡುತ್ತವೆ ಎಂದು. ಇದೂ ಅದರಂತೆಯೇ. ಹೆದರಬೇಡ, ನಾವು ಮುನ್ನಡೆಯೋಣ." ಎಂದ.
ಮಹಾರಾಜನ ಮಾತಿಗೆ ಭಟ್ಟಿ ತನ್ನ ದುಗುಡವನ್ನು ತಡೆದುಕೊಂಡು ಇನ್ನು ಮರುಮಾತನಾಡಿ ಪ್ರಯೋಜನ ವಿಲ್ಲೆಂದು ತಿಳಿದು, ಪ್ರಯಾಣ ಮುಂದುವರಿಸಿದ.
ಮುಂದೆ ಅವರ ಪ್ರಯಾಣದಲ್ಲಿ ಯಾವುದೇ ತೊಂದರೆ ಕಂಡು ಬರಲಿಲ್ಲ. ಮಹಾರಾಜನೊಡನೆ ಮಂತ್ರಿ ಭಟ್ಟಿ ಅವರ ಸೇನಾ ತುಕಡಿ ಸುರಕ್ಷಿತವಾಗಿ ಊರ ಗಡಿಯವರೆಗೆ ಬಂದು ತಲುಪಿದರು. ರಾತ್ರಿ ಸುಮಾರು ಒಂಭತ್ತರ ಸಮಯ, ರಾಜ, ಮಂತ್ರಿ ಹಾಗು ಅವರ ಸೇನೆ ತಮ್ಮ ರಾತ್ರಿಯ ಫಲಾಹಾರ ಮುಗಿಸಿ, ಮಹಾರಾಜನನ್ನು ಒಬ್ಬನನ್ನೇ ಮುಂದೆ ಹೋಗಲು ಬಿಳ್ಕೊಟ್ಟರು. ರಾಜ ವಿಕ್ರಮ ಕಣ್ಣಳತೆಯ ಮೀರಿ ಕಾಣಿಸುವವರೆಗೂ ಅಲ್ಲಿಯೇ ನಿಂತು ವೀಕ್ಷಿಸಿ ನಂತರ ಅಲ್ಲಿಂದ ಹಿಂದಿರುಗಿದರು.
***
ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ, ಸ್ಮಶಾನ ಮತ್ತದರ ಮುರಿದ ಬಾಗಿಲು ಸ್ವಲ್ಪ ದೂರದಲ್ಲಿ ಕಾಣುತ್ತಿದ್ದಂತೆ ವಿಕ್ರಮ ತನ್ನ ಕುದುರೆಯನ್ನು ನಿಲ್ಲಿಸಿ ಕೆಳಗೆ ಜಿಗಿದ. ಕುದುರೆಯನ್ನು ಪಕ್ಕದ ಮರವೊಂದಕ್ಕೆ ಕಟ್ಟಿ, ಪ್ರೀತಿಯಿಂದ ಅದರ ಮೈ ತಡವಿ, ತಾನು ಮರಳಿ ಬರುವವರೆಗೆ ಆಯಾಸ ಪರಿಹರಿಸಿಕೊ ಎಂಬಂತೆ ಅದರತ್ತ ಪ್ರೀತಿಯ ದೃಷ್ಟಿ ಬೀರಿ, ಸ್ಮಶಾನದ ಬಾಗಿಲಿನ ಕಡೆ ಹೆಜ್ಜೆ ಹಾಕಿದ.

ಮುಂದುವರಿಯುವುದು...

Tuesday, July 9, 2013

ವಿಕ್ರಮಾದಿತ್ಯ ಮತ್ತು ಬೇತಾಳ - ಭಾಗ೧ - ಮಾಂತ್ರಿಕ ಫಲ

ಪೌರ್ಣಿಮೆಯ ಮಾರನೆದಿನ ರಾಜಸಭೆಯಲ್ಲಿ ಎಲ್ಲರೂ ಸೇರಿದ್ದಾರೆ. ಮಂತ್ರಿ ಸೇನಾಧಿಪತಿಗಳಿಂದ ಹಿಡಿದು ಗಣ್ಯಾತಿಗಣ್ಯರೆಲ್ಲರೂ ನೆರೆದಿದ್ದಾರೆ.
ಅಷ್ಟರಲ್ಲಿ ಸೇನಾನಾಯಕ ಮಹಾರಾಜನ ಬರುವಿಕೆಯನ್ನು ತಿಳಿಸುತ್ತಾ "ರಾಜಾಧಿ ರಾಜ, ರಾಜ ಮಾರ್ತಾಂಡ, ರಾಜ ಗುಣಶೆಕರ, ರಾಜ ಕರುಣಾಕರ, ರಾಜಾತ್ಮಜ ರಮಣ, ಶ್ರೀ ಶ್ರೀ ಶ್ರೀ ವಿಕ್ರಮಾದಿತ್ಯ ಮಹಾರಾಜ...""ಬಹು ಪರಾಕ್, ಬಹು ಪರಾಕ್, ಬಹು ಪರಾಕ್".
ರಾಜ ಗಾಂಭೀರ್ಯದೊಂದಿಗೆ ಸಿಂಹ ನಡಿಗೆಯಲ್ಲಿ ಸಿಂಹಾಸನದೆಡೆಗೆ ನಡೆದುಬಂದ ವಿಕ್ರಮಾದಿತ್ಯ ಸಭೆಗೆ ವಂದಿಸಿ ಸಿಂಹಾಸನವನ್ನು ಅಲಂಕರಿಸಿದ.

ವಿಕ್ರಮಾದಿತ್ಯ ತನ್ನ ನೆಚ್ಚಿನ ಮಂತ್ರಿ ಭಟ್ಟಿ ಯೆಡೆ ತಿರುಗಿ, "ಮಹಾಮಂತ್ರಿಗಳೆ ರಾಜ್ಯ ಸುಭಿಕ್ಷೆಯ ಸಲುವಾಗಿ ಈ ಬಾರಿಯ ವಾರ್ಷಿಕ ಆಯವ್ಯಯದಲ್ಲಿ ಹೆಚ್ಚಿನ ಮೊಗದನ್ನು ವಿನಿಯೋಗಿಸಿ. ಪ್ರತ್ಯೇಕವಾಗಿ ವ್ಯವಸಾಯದಲ್ಲಿ ಹಿಂದಿನ ವರ್ಷ ಹೂಡಿದ ಬಂಡವಾಳಕ್ಕಿಂತ ಈ ವರ್ಷ ಇನ್ನಷ್ಟು ಹೆಚ್ಚಿಸಿ, ನಮ್ಮ ವ್ಯವಸಾಯಿಗರ ಕುಂದು ಕೊರತೆಗಳನ್ನು ನೇರವಾಗಿ ನನ್ನ ಗಮನಕ್ಕೆ ತರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿ."
ಭಟ್ಟಿ ಮಹಾರಾಜನಿಗೆ ವಂದಿಸುತ್ತಾ "ಅಪ್ಪಣೆ ಮಹಾಪ್ರಭು".
ತನ್ನ ಮಾತುಗಳನ್ನು ಮುಂದುವರಿಸುತ್ತಾ ವಿಕ್ರಮಾದಿತ್ಯ, "ರಾಜ ಸಭೆಗೆ ಪ್ರವೇಶ ಬಯಸಿಬಂದ ಪ್ರಜೆಗಳಿಂದ ಪ್ರವೇಶಧನ ವಸೂಲಾತಿ ಮಾಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ರಾಜ ಸಭೆ ನಮ್ಮ ಪ್ರಜೆಗಳಿಗಾಗಿ ನ್ಯಾಯಾಲಯದಂತೆ. ರಾಜನನ್ನು ನೋಡಬಯಸಿಬಂದ, ನ್ಯಾಯ ಬಯಸಿಬಂದ ಯಾವುದೇ ವ್ಯಕ್ತಿಯಿಂದ ಧನವಸೂಲಾತಿ ಅನೈತಿಕವಾದುದು ಹಾಗು ಅಧರ್ಮವಾದುದು. ಆದ್ದರಿಂದ ಪ್ರವೇಶ ದ್ವಾರದ ಸೈನಿಕರಿಗೆ ಸರಿಯಾದ ಮಾಹಿತಿಗಳನ್ನು ನೀಡಿ, ಇಂದಿನಿಂದ ನನ್ನ ರಾಜಸಭೆಗೆ ಹಾಜರಾಗುವ ಎಲ್ಲ ಪ್ರಜೆಗಳಿಗೆ ಮುಕ್ತ ಪ್ರವೇಶ ಅವಕಾಶ ಮಾಡಿಕೊಡಿ."
ಸೇನಾಧಿಪತಿ, "ಅಂತೆಯೇ ಆಗಲಿ ಮಹಾಪ್ರಭು".

ಅಷ್ಟರಲ್ಲಿ ಪ್ರವೇಶದ್ವಾರದಲ್ಲಿ ಡಮರುಗ ನುಡಿಸುತ್ತ ನಾಗಾಸಾಧುವೊಬ್ಬ ರಾಜಸಭೆಗೆ ಪ್ರವೇಶಿಸಿದ,
ತನ್ನ ಗುಡುಗಿನಂತ ದ್ವನಿಯಲ್ಲಿ "ಧೀರಾಧಿ ಧೀರ, ಕಲಿಯುಗ ಮಾರ್ತಾಂಡ, ಗಂಡ, ಪ್ರಚಂಡ, ವಿಕ್ರಮ, ತಿವಿಕ್ರಮ, ಶ್ರೀ ವಿಕ್ರಮಾದಿತ್ಯ ಮಹಾರಾಜ, ವಿಜಯೀಭವ".
ರಾಜ ಸಾಧುವಿಗೆ ಕೈ ಜೋಡಿಸಿ ವಂದಿಸಿ,
"ಬನ್ನಿ, ಸಾಧುವರ್ಯ, ನಿಮ್ಮ ಆಗಮನದಿಂದ ನಮ್ಮ ಸಭೆಗೆ ಕಳೆಬಂದಂತಾಯಿತು, ಆಸಿನರಾಗಿ".
ಸಾಧು ಒಮ್ಮೆ ಎಲ್ಲರಲ್ಲಿಯೂ ದೃಷ್ಟಿ ಇಟ್ಟು ನೊಡಿ, ನಂತರ ರಾಜನೆದುರು ತಿರುಗಿ,
"ವಂದನೆಗಳು ರಾಜನ್. ಕುಳಿತುಕೊಳ್ಳಲು ಇಂದು ಸಮಯದ ಅಭಾವವಿದೆ. ದಾರಿಯಲ್ಲಿ ನಡೆದು ಬರುವಾಗ ಒಂದು ಅಮೂಲ್ಯ ಫಲವೊಂದನ್ನು ನೋಡಿದೆ. ಅದನ್ನು ನಿನಗೆ ಉಡುಗೊರೆಯಾಗಿ ಕೊಡಬೇಕೆಂದು ಬಂದಿದ್ದೇನೆ. ಇದೋ ಸ್ವೀಕರಿಸು" ಎಂದು ತನ್ನ ಜೋಳಿಗೆಯಿಂದ ಫಲವೊಂದನ್ನು ತೆಗೆದು ರಾಜನ ಕೈಗಿತ್ತ.
ರಾಜ ಫಲವನ್ನೊಮ್ಮೆ ನೋಡಿದ. ಅದೊಂದು ಪೂರ್ತಿ ಬಲಿಯದ, ಸಾಮಾನ್ಯ ಫಲ ಎನ್ನಿಸಿತು. ಅಂತಹ ಅಮೂಲ್ಯವೆನು ತೋರಲಿಲ್ಲ. ಆದರೂ ತೋರಿಸಿಕೊಳ್ಳದೆ,
"ನಿಮ್ಮ ಉಡುಗೊರೆಗೆ ಧನ್ಯವಾದಗಳು ಸಾಧುವರ್ಯ. ಕ್ಷಮೆ ಇರಲಿ, ನಾನು ನನ್ನ ಪ್ರಜೆಗಳಿಂದ ಕಾರಣವಿಲ್ಲದೆ ಯಾವುದೇ ಉಡುಗೊರೆಯನ್ನು ಪಡೆಯಲಾರೆ. ಈ ಉಡುಗೊರೆಯ ಬದಲಾಗಿ ನಮ್ಮಿಂದ ಏನಾದರೂ ಅಪೆಕ್ಷಣೆ ಇದ್ದಲ್ಲಿ ತಿಳಿಸಿ".

ಸಾಧು, ಏನೋ ಯೋಚಿಸಿದಂತೆ ಮಾಡಿ, "ಇದೆ ಮಹಾರಾಜ, ಅಪೆಕ್ಷಣೆ ಇದೆ. ಯಾವುದೇ ಕಾರಣವಿಲ್ಲದೆ ಯಾವ ಪ್ರಜೆಯೂ ರಾಜ ಸಭೆಗೆ ಬರಲಾರ. ಅಂತೆಯೇ, ನಾನು ಒಂದು ಅಪೆಕ್ಷಣೆ ಇಟ್ಟು ಬಂದಿದ್ದೇನೆ. ಆದರೆ, ರಾಜನ್, ನಾನದನ್ನು ಸಮಯಬಂದಾಗ ತಿಳಿಸುತ್ತೇನೆ, ಇಂದು ಸಮಯ ಸೂಕ್ತವಾಗಿಲ್ಲ. ನಾನಿನ್ನು ಬರುತ್ತೇನೆ. ವಿಜಯೀಭವ ಮಹಾರಾಜ". ಎಂದು ರಾಜ ಸಭೆಯಿಂದ ಹೊರಟು ಹೋದ.
ಸಾಧು ತೆರಳಿದ ನಂತರ, ಮಹಾರಾಜ ಸಭೆಯನ್ನು ಮುಂದುವರಿಸಿದ.

ಆದಿನ ರಾತ್ರಿ ತನ್ನ ಶಯ್ಯ ಗೃಹದಲ್ಲಿ ವಿಶ್ರಮಿಸುತ್ತ, ರಾಜ ಫಲವನ್ನು ಹಿಡಿದು, ಸಾಧುವಿನ ನಡವಳಿಕೆಯ ಬಗ್ಗೆ ಆಲೋಚಸುತ್ತ, ಕೆಲವೊಂದು ಪ್ರಶ್ನೆಗಳು ಆತನ ಮನದೊಳಗೆ ನುಸುಳಿ ಹೊರಬಿದ್ದವು. 'ಸಾಧು ಫಲವೊಂದನ್ನು ನೀಡಿ ಅದನ್ನು ಅಮೂಲ್ಯವೆಂದು ಹೇಳಿದ್ದೇಕೆ?'. 'ಸಾಧುವಿನ ನಡವಳಿಕೆಯಂತೂ ಏನೋ ವಿಚಿತ್ರವಾಗಿದ್ದವು', 'ಆತನ ವಿಜಯೀಭವ ಎಂಬುದರ ಅರ್ಥವೇನಿರಬಹುದು?', 'ಸಮಯಬಂದಾಗ ಏನನ್ನೋ ಕೇಳುತ್ತೇನೆ ಎಂದು ಹೋಗಿದ್ದಾನೆ, ಏನಿರಬಹುದು ಇದರ ಹಿಂದಿನ ಗುಟ್ಟು?'.
ರಾಜ ಸಾಧು ನೀಡಿದ ಫಲವನ್ನು ಮತ್ತೊಮ್ಮೆ ಪರೀಕ್ಷಿಸಿದ, ಸಾಮಾನ್ಯ ಫಲ, ಎನೂ ವಿಶೇಷವಿಲ್ಲ, ಇನ್ನೂ ಪೂರ್ತಿ ಮಾಗಿಲ್ಲದ ಕಾಯಿ.
ಸರಿ, ಸಾಧುವಿನ ಹೇಳಿಕೆಯಂತೆ ಆ ಸರಿಯಾದ ಸಮಯ ಬರಲಿ, ಅಲ್ಲಿಯವರೆಗೆ ಕಾಯುತ್ತೇನೆ, ಎಂದು ಎಣಿಸಿ, ರಾಜ ತನ್ನ ಪರಿಚಾರಕನನ್ನು ಕರೆದು ಫಲವನ್ನು ಆತನ ಕೈಗಿತ್ತು ಜೋಪಾನವಾಗಿ ತೆಗೆದಿಡುವಂತೆ ತಿಳಿಸಿದ.

ಮರುದಿನ ಎಂದಿನಂತೆ ರಾಜ ಸಭೆ ಶುರುವಾಗುವ ಸಮಯಕ್ಕೆ ಸರಿಯಾಗಿ ಸಾಧು ಪುನಃ ಪ್ರವೇಶದ್ವಾರದಲ್ಲಿ ಕಾಣಿಸಿಕೊಂಡು, ತನ್ನ ಡಮರುಗ ನುಡಿಸುತ್ತ ಸಭೆಯನ್ನು ಪ್ರವೇಶಿಸಿ, ರಾಜನನ್ನು ವಂದಿಸಿ ಇನ್ನೊಂದು ಫಲವನ್ನು ನೀಡಿದ. ರಾಜ ಕೇಳಿದ್ದಕ್ಕೆ, ಸರಿಯಾದ ಸಮಯ ಬರಲಿ ತಿಳಿಸುತ್ತೇನೆ ಎಂದು ಹೇಳಿ, ರಾಜನನ್ನು ವಿಜಯೀಭವ ಎಂದು ಹರಸಿ, ಹೊರಟುಹೋದ.

ಹೀಗೆಯೇ ಏಳು ದಿನಗಳು ಕಳೆದವು, ಪ್ರತಿದಿನ ರಾಜ ಸಭೆಯ ಆರಂಭದಲ್ಲಿ ಸಾಧು ಕಾಣಿಸಿಕೊಂಡು ರಾಜನಿಗೆ ಫಲವೊಂದನ್ನು ನೀಡಿ, ವಿಜಯೀಭವ ಎಂದು ಹರಸಿ ಹೊರಟುಹೋಗುತ್ತಿದ್ದ . ವಿಕ್ರಮಾದಿತ್ಯ ತಾಳ್ಮೆಯಿಂದ ಸಾಧುವಿನ 'ಸರಿಯಾದ ಸಮಯಕ್ಕೆ' ಕಾದ.

ಹಿಗಿರಲೊಂದು ದಿನ, ರಾಜ ಮಾರುವೆಷಧಾರಿಯಾಗಿ ತನ್ನ ಮಂತ್ರಿ ಭಟ್ಟಿಯೊಂದಿಗೆ ರಾಜ್ಯ ಸಂಚರಿಸುತ್ತಿರುವಾಗ, ರಾಜನ ಕುದುರೆಗೆ ಅಡ್ಡವಾಗಿ ಅದೇ ಸಾಧು ಕಾಣಿಸಿಕೊಂಡ. ರಾಜ ಮಾತನಾಡುವ ಮೊದಲೇ ರಾಜನ ಕೈಗೆ ಹಣ್ಣಾದ ಫಲವೊಂದನ್ನು ನೀಡಿದ, ಮತ್ತು ವಿಜಯೀಭವ ಎಂದು ಹರಸಿದ. ರಾಜನಿಗೆ ಅಚ್ಚರಿಯಾಗಿ ಸಾಧುವಿಗೆ ವಂದಿಸಿ, ಕೇಳಿದ, "ನನ್ನ ಗುರುತು ಹೇಗೆ ಪತ್ತೆಹಚ್ಚಿದಿರಿ? ನಾನು ಮಾರುವೆಷದಲ್ಲಿದ್ದೇನೆ. ಹಲವುದಿನಗಳಿಂದ ನನ್ನ ಸಭೆಗೆ ಬಂದು ನನಗೆ ಈ ಫಲವನ್ನು ನೀಡುತ್ತಿದ್ದಿರಿ, ಏನಿದರ ಹಿಂದಿನ ಮರ್ಮ? ಇಷ್ಟು ದಿನ ಹಣ್ಣಾಗದ ಫಲವನ್ನು ನೀಡುತ್ತಿದ್ದವರು ಇಂದೇಕೆ ಪೂರ್ತಿ ಹಣ್ಣಾದ ಫಲವನ್ನು ನನ್ನ ಕೈಗಿತ್ತಿದ್ದಿರಿ? ಪ್ರತಿದಿನವೂ ನನಗೆ 'ವಿಜಯೀಭವ' ಎಂದು ಹರಸುತ್ತಿದ್ದಿರಿ, ನನ್ನ ಯಾವ ಕಾರ್ಯ ಸಫಲವಾಗಲೆಂದು ಈ ಹಾರೈಕೆ? ಸಮಯಬಂದಾಗ ನನ್ನಿಂದ ಏನನ್ನೋ ಅಪೇಕ್ಷಿಸುವಿರೆಂದು ಹೇಳಿದ್ದಿರಿ, ಅದೇನದು?".

ಸಾಧು ಮುಗುಳುನಗುತ್ತ, "ರಾಜನ್, ನಿನ್ನ ಮಾರುವೇಷ ನಿನ್ನ ಬಾಹ್ಯಕ್ಕೆ, ಆಂತರ್ಯಕ್ಕಲ್ಲ. ನೀನು ದೇಹವನ್ನು ಮರೆಮಾಚಬಹುದು, ಆದರೆ ಮನಸನ್ನು ನನ್ನಿಂದ ಮರೆಮಾಚಲಾರೆ? ನನ್ನ ತಪೋಬಲಕ್ಕೆ ನಾನು ನಿನ್ನ ದೇಹದ ಗುರುತು ಹಿಡಿಯುವ ಅಗತ್ಯ ಇಲ್ಲ, ನಿನ್ನ ಮನಸ್ಸನ್ನು ಗುರುತಿಸಬಲ್ಲೆ.

ಹೌದು, ನಿನ್ನ ಗ್ರಹಿಕೆ ಸರಿಯಾಗಿದೆ, ಇಂದು ನಾನು ಕಾಯುತ್ತಿದ್ದ ಸೂಕ್ತ ಸಮಯ ಬಂದಿದೆ, ನೀನು ಆ ಫಲವನ್ನು ತಿನ್ನಬಹುದು. ನಾನು ಇಲ್ಲಿಯವರೆಗೆ ನೀಡಿದ ಎಲ್ಲಾ ಫಲಗಳೂ ಇಂದಿಗೆ ಚೆನ್ನಾಗಿ ಮಾಗಿ ಹಣ್ಣಾಗಿವೆ ಕೂಡ. ನೀನದನ್ನು ಸೇವಿಸಬಹುದು."
ರಾಜ ತನ್ನ ಬಳಿಯಿದ್ದ ಕತ್ತಿಯಿಂದ ಸಾಧು ನೀಡಿದ ಹಣ್ಣನ್ನು ಕತ್ತರಿಸಿದ. ಅತ್ಯಾಶ್ಚರ್ಯ, ಹಣ್ಣಿನಿಂದ ಅಮೂಲ್ಯ ರತ್ನವೊಂದು ಹೊರಬಿತ್ತು. ರಾಜ ತನ್ನೊಂದಿಗಿದ್ದ ಸೇವಕನನ್ನು ಕಳುಹಿಸಿ, ತನ್ನ ಪರಿಚಾರಕನಿಗೆ ಜಾಗರೂಕತೆಯಿಂದ ತೆಗೆದಿರಿಸಲೆಂದು ಹೇಳಿ ಕೊಟ್ಟಿದ್ದ ಎಲ್ಲ ಹಣ್ಣುಗಳನ್ನು ತರಿಸಿ, ಒಂದೊಂದಾಗಿ ಕತ್ತರಿಸಿ ನೋಡಿದ, ಪ್ರತಿಯೊಂದು ಹಣ್ಣಿನಲ್ಲೂ ಒಂದೊಂದು ಅತ್ಯಮೂಲ್ಯ ರತ್ನಗಳು ಹೊರಬಿದ್ದವು.
ರಾಜ ಅತ್ಯಾಶ್ಚರ್ಯದಿಂದ ಸಾಧುವಿನೆಡೆ ನೊಡಿ, "ಸಾಧುವರ್ಯ, ಏನೀ ಚಮತ್ಕಾರ, ಏನಿದರ ಹಿಂದಿನ ಗುಟ್ಟು? ಪ್ರತಿದಿನ ನೀವು ನನಗೆ ಇಂತಹ ಅಮೂಲ್ಯ ರತ್ನಗಳಿದ್ದ ಫಲವನ್ನು ಏಕೆ ನಿಡುತ್ತಿದ್ದಿರಿ?" ಎಂದ.
ಸಾಧು ಪುನಃ ಮುಗುಳುನಗುತ್ತ "ಹೇಳುತ್ತೇನೆ ಮಹಾರಾಜ. ಇದೊಂದು ಮಾಂತ್ರಿಕ ಫಲ. ಇದು ಯಾರ ಕೈ ಸೇರುತ್ತದೋ ಜೀವನದಲ್ಲಿ ಅವರಿಗೆ ಎಂದೂ ದಾರಿದ್ರ್ಯ ಕಾಡಲಾರದು. ಸುಖ ಸಂಪತ್ತು ಉಕ್ಕಿ ಹರಿಯುವುದು. ಈ ಹಣ್ಣನ್ನು ಉತ್ತಿ ಬಿತ್ತರೆ, ತನ್ನಂತಹ ಇನ್ನಷ್ಟು ಹಣ್ಣುಗಳನ್ನು ಕೊಡಬಲ್ಲ ಹಲವು ವೃಕ್ಷಗಳನ್ನು ಬೆಳೆಸಬಲ್ಲದು. ನೀನೊಬ್ಬ ಉತ್ತಮ ಆಡಳಿತಗಾರ, ನಿನಗೆ ಈ ಸಂಪತ್ತನ್ನು ನೀಡಿದರೆ ರಾಜ್ಯದ ಹಿತಕ್ಕಾಗಿ ಖಂಡಿತ ಬಳಸುತ್ತಿಯ ಎಂಬ ಪೂರ್ಣ ವಿಶ್ವಾಸ ನನಗಿದೆ. ಈ ಫಲ ಪೂರ್ತಿ ಮಾಗಿ ಹಣ್ಣಾದ ಬಳಿಕವೇ ಈ ರತ್ನವ ಕೊಡಬಲ್ಲದು. ಇಷ್ಟು ದಿನ ನಿನಗೆ ನೀಡಿದ ಫಲಗಳು ಪೂರ್ತಿ ಮಾಗದ ಫಲಗಳು, ಇಷ್ಟರಲ್ಲಾಗಲೇ ನೀನದನ್ನು ಕತ್ತರಿಸಿದ್ದಲ್ಲಿ ನಿನಗೆ ಅದರಿಂದ ಯಾವುದೇ ರತ್ನಗಳು ಸಿಗುತ್ತಿರಲಿಲ್ಲ; ಈ ಫಲದ ಹಿಂದಿನ ಮರ್ಮವೂ ತಿಳಿಯುತ್ತಿರಲಿಲ್ಲ. ಅಂತೆಯೇ, ರಾಜನ್, ಜೀವನದಲ್ಲಿ ತಾಳ್ಮೆ ಇಲ್ಲದ ಮನುಷ್ಯ ಏನನ್ನೂ ಸಾಧಿಸಲಾರ; ಯಾವ ವಿಶೇಷವಾದುದನ್ನೂ ಪಡೆಯಲಾರ. ನಿನ್ನ ತಾಳ್ಮೆಗೆ ಮೆಚ್ಚಿದೆ ರಾಜನ್. ಈ ಫಲದ ಹಕ್ಕುದಾರ ನೀನೆ."
ರಾಜ ಸಾಧುವಿಗೆ ವಂದಿಸಿ, "ಸಾಧುವರ್ಯ, ನಿಮ್ಮ ಕೊಡುಗೆಗೆ ಧನ್ಯವಾದಗಳು. ಈ ಸಂಪತ್ತನ್ನು ನನ್ನ ರಾಜ್ಯದ ಜನರ ಸುಖ ಕ್ಷೇಮಕ್ಕೆ ಖಂಡಿತ ಸದ್ಬಳಕೆ ಮಾಡುತ್ತೇನೆ. ಈ ಕೊಡುಗೆಗೆ ಪ್ರತಿಯಾಗಿ ನೀವೆನನ್ನೊ ಬಯಸುತ್ತಿದ್ದಿರಿ ಎಂಬುದು ತಿಳಿದುಬಂದಿದ್ದೇನೆ, ಅದೇನೆಂದು ತಿಳಿಸಿ. ಅದನ್ನು ಖಂಡಿತಾ ನೆರವೇರಿಸಿ ಕೊಡುತ್ತೇನೆ. "

ಸಾಧು ಕೆಲವು ಕ್ಷಣಗಳವರೆಗೆ ರಾಜನನ್ನು ದಿಟ್ಟಿಸಿ ನೊಡಿ, ಮೌನ ಮುರಿದು "ರಾಜನ್, ನೀನು ಅತೀ ಧೈರ್ಯವಂತ, ಶೂರನೆಂದು ಕೇಳಿದ್ದೇನೆ. ಇಂದಿನಿಂದ ಎಳು ದಿನಗಳ ತರುವಾತ, ಅಮಾವಾಸ್ಯೆಯ ರಾತ್ರಿ, ಊರ ಹೊರಗಿನ ಭಯಾನಕ ಕಾಡಿನ ಮದ್ಯ ಇರುವ ಸ್ಮಶಾನಕ್ಕೆ ನೀನು ಒಬ್ಬನೇ ಬರಬೇಕು. ಆ ಸ್ಮಶಾನದಲ್ಲಿ ಆಲದ ಮರವೊಂದಿದೆ, ಅದರ ಕೆಳಗೆ ನಿನಗೆ ನಾನು ಸಿಗುತ್ತೇನೆ. ನಾನೊಂದು ಸಿದ್ದಿಗಾಗಿ ಯಜ್ಞ ನಡೆಸುತ್ತಿದ್ದೇನೆ, ಅದಕ್ಕೆ ನಿನ್ನ ಸಹಾಯ ಬೇಕು." ಎಂದ.
"ಸಾಧುವರ್ಯ, ನೀವು ಹೇಳಿದಂತೆ ಇಂದಿನಿಂದ ಎಳು ದಿನಗಳ ತರುವಾತ, ಅಮಾವಾಸ್ಯೆಯ ರಾತ್ರಿ, ಊರ ಹೊರಗಿನ ಸ್ಮಶಾನದಲ್ಲಿರುವ ಒಂಟಿ ಆಲದ ಮರದ ಕೆಳಗೆ ನಿಮ್ಮನ್ನು ಭೇಟಿಯಾಗುತ್ತೇನೆ". ವಿಕ್ರಮಾದಿತ್ಯ ಮತ್ತು ಭಟ್ಟಿ ಸಾಧುವಿಗೆ ವಂದಿಸಿ ಅಲ್ಲಿಂದ ತೆರಳಿದರು.

ಮಂತ್ರಿ ಭಟ್ಟಿ ದಾರಿಮಧ್ಯ ರಾಜನನ್ನು ಕುರಿತು, "ಮಹಾರಾಜ, ನಿಮ್ಮ ಸುರಕ್ಷತೆಯ ವಿಚಾರದಿಂದ ನಿಮ್ಮನ್ನು ಒಬ್ಬರೇ ಅಲ್ಲಿಗೆ ಹೋಗಲು ನಾನು ಅನುಮತಿ ಕೊಡಲಾರೆ" ಎಂದ.
ಅದಕ್ಕೆ ವಿಕ್ರಮ, "ಭಟ್ಟಿ, ನಾನು ಸಾಧುವಿಗೆ ಅವರ ಕೋರಿಕೆಯನ್ನು ಇಡೆರಿಸುವುದಾಗಿ ಮಾತುಕೊಟ್ಟಿದ್ದೆನೆ. ನನ್ನ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ. ನನ್ನ ಸುರಕ್ಷತೆ ನಾನು ಮಾಡಿಕೊಳ್ಳಬಲ್ಲೆ. ಇದರಲ್ಲಿ ಹಸ್ತಕ್ಷೇಪ ಬೇಡ" ಎಂದ.

ಮುಂದುವರಿಯುವುದು...