Friday, August 16, 2013

ವಿಕ್ರಮಾದಿತ್ಯ ಮತ್ತು ಬೇತಾಳ - ಭಾಗ೩ - ಬೆನ್ನು ಹತ್ತಿದ ಬೇತಾಳ

ಭಾಗ೧ - ಮಾಂತ್ರಿಕ ಫಲ
ಭಾಗ೨ - ಅಗೋಚರ ಚೇಷ್ಟೆ

***
ವಿಕ್ರಮ, ಮುರುಕು ಬಾಗಿಲನ್ನು ದಾಟಿ ಸ್ಮಶಾನದಲ್ಲಿ ಕಾಲಿಡುತ್ತಿದ್ದಂತೆ ಜೋರಾಗಿ ಬೀಸುತ್ತಿದ್ದ ಗಾಳಿ ಒಮ್ಮೆ ಹಠಾತ್ ನಿಂತಿತು. ನಿಂತ ನೆಲ ಒಮ್ಮೆ ಸಣ್ಣಗೆ ಕಂಪಿಸಿತು. ಈ ಬದಲಾವಣೆಯನ್ನು ಮೊದಲೇ ನಿರಿಕ್ಷಿಸಿರುವವನಂತೆ ವಿಕ್ರಮ ತನ್ನ ಓರೆಯಿಂದ ಖಡ್ಗವನ್ನು ಹೊರಗೆಳೆದು ಸುತ್ತಲೂ ವೀಕ್ಷಿಸಿದ. ಕರಾಳ ರಾತ್ರಿ, ಅಲ್ಲಲ್ಲಿ ಹೊಗೆಯಾಡುತ್ತಿದ್ದ ಶವಗಳು, ಸುತ್ತಲೂ ದಟ್ಟವಾಗಿ ಬೆಳೆದು ನಿಂತ ಮರಗಳು, ಅವುಗಳ ಮೇಲೆ ಭೀಕರವಾಗಿ ಕಣ್ಣರಳಿಸಿ ನೋಡುವ ಗೂಬೆಗಳು, ನೆಲದಲ್ಲಿ ಅರೆಬೆಂದು ಕೊಳೆತು ನಾರುವ ದೇಹಗಳು, ದೂರದಲ್ಲಿ ಸತ್ತ ಶವಗಳನ್ನು ಹರಿದು ಹಂಚಿಕೊಳ್ಳಲು ಕಚ್ಚಾಡುತ್ತಿರುವ ನರಿಗಳು, ಮನುಷ್ಯನ ಭಯವೇ ಇಲ್ಲದೆ ಅತ್ತಿಂದಿತ್ತ ಓಡಾಡುವ ಮಾಂಸಭಕ್ಷಕ ಹೆಗ್ಗಣಗಳು, ಮರದ ಕೊಂಬೆಗೆ ಸುತ್ತುಬಂದು ಬೇಟೆಗಾಗಿ ಹೊಂಚು ಹಾಕುತ್ತಿರುವ ಘಟ ಸರ್ಪಗಳು, ಅಪಾರದರ್ಶಕವಾಗಿ ನೇಯಲ್ಪಟ್ಟ ಬಲೆಗಳು, ಅವುಗಳ ಮೇಲೆ ಪಕ್ಷಿಗಳನ್ನೂ ನೇರ ಬೇಟೆಯಾಡಿ ಹಿಡಿಯಬಲ್ಲ ಅಂಗೈ ಗಾತ್ರದ ಜೇಡಗಳು, ನರಮನುಷ್ಯನ ಓಡಾಟವೇ ಇಲ್ಲದಂತೆ ಎಲ್ಲೆಂದರಲ್ಲಿ ಬೆಳೆದುನಿಂತ ಹುಲ್ಲು ಗಿಡಗಂಟಿಗಳು, ಸಾಮಾನ್ಯ ಮನುಷ್ಯನಾಗಿದ್ದಲ್ಲಿ ಕಾಲುಕೀಳುವುದರಲ್ಲಿ ಸಂದೇಹವೇ ಇರಲಿಲ್ಲ.
ಖಡ್ಗದಿಂದ ಹುಲ್ಲು ಗಂಟಿಗಳನ್ನು ಕತ್ತರಿಸುತ್ತ, ಜೇಡರ ಬಲೆಗಳನ್ನು ಪಕ್ಕಕ್ಕೆ ಸರಿಸುತ್ತ ವಿಕ್ರಮ ಮೆಲ್ಲ ಮುಂದಕ್ಕೆ ಹೆಜ್ಜೆ ಹಾಕಿದ.
ಸುಮಾರು ಅರ್ಧ ಮೈಲಿ ಕ್ರಮಿಸಿದ ವಿಕ್ರಮನಿಗೆ ದೂರದಲ್ಲಿ, ದಟ್ಟ ಆಲದಮರದ ಬಳಿ ನರಮನುಷ್ಯನ ಆಕ್ರತಿಯೊಂದು ಕಂಡಿತು. ಒಮ್ಮೆ ನಿಂತು, ಆ ಆಕ್ರತಿ ಕಡೆ ದೃಷ್ಟಿ ಹರಿಸಿ, ವಿಕ್ರಮ ಅದರತ್ತ ಹೆಜ್ಜೆ ಹಾಕಿದ.

ಹತ್ತಿರ ಹೋಗಿ ನೋಡಿದಾಗ, ಅದೇ ಸಾಧು ಮೈ ಎಲ್ಲಾ ವಿಭೂತಿ ಬಳಿದು ಅರೆ ನಗ್ನನಾಗಿ ಕಣ್ಣು ಮುಚ್ಚಿ ನಿಂತಿದ್ದ. ಆತನ ಹಣೆಯ ವಿಭೂತಿ ಪಟ್ಟಿಯ ನಡುವೆ ಅರಿಶಿನದೊಂದಿಗೆ ಬೆರೆತ ಕೆಂಪು ರಕ್ತದಂತ ಬಣ್ಣದ ಕುಂಕುಮದ ಬೊಟ್ಟು. ಮೈಯಲ್ಲಿ ರುದ್ರಾಕ್ಷಿ ಮಾಲೆಗಳು. ಸುತ್ತಲೂ, ಕತ್ತು ಕೊಯ್ದು ಬಿದ್ದಿದ್ದ ಕೋಳಿ, ಕುರಿಗಳು. ಯಾಗ ಸಿದ್ದತೆಗೆ ತಯಾರಿ ನಡೆಸಿದ್ದ ಬೆಂಕಿ ಉರಿ. ವಿಕ್ರಮ ತುಟಿ ಪಿಟಿಕ್ ಎನ್ನದೆ ಸಾಧುವಿನೆದುರು ನಿಂತ.

ಕಣ್ಣು ತೆರೆದ ಸಾಧು, "ಬಾ ವಿಕ್ರಮ, ನಿನ್ನ ಬರುವಿಗಾಗಿಯೇ ಕಾಯುತ್ತಿದ್ದೆ. ನನಗೆ ತಿಳಿದಿತ್ತು ನೀನು ಬಂದೇ ಬರುತ್ತಿಯ ಎಂದು. ನಿನ್ನ ಧೈರ್ಯ ಸಾಹಸಗಳ ಬಗ್ಗೆ ಕೇಳಿದ್ದೆ, ಇಂದು ನೇರ ನೋಡಿದಂತಾಯಿತು. ಭಲಾ. ನಿನ್ನ ಪ್ರಯಾಣ ಸುಖಕರವಾಯಿತೆ?"

ವಿಕ್ರಮ ಮಾತನಾಡ ನಿಲ್ಲದೆ, ಸಾಧುವಿಗೆ ನಮಿಸಿ, "ನನ್ನಿಂದ ಯಾವುದೋ ಕೆಲಸವನ್ನು ನಿರೀಕ್ಷಿಸಿದ್ದಿರಿ, ಅದೇನೆಂದು ತಿಳಿಸಿ" ಎಂದ.
ತಾನಾಡಿದ ಮಾತಿಗೆ ಪ್ರತಿಕ್ರಿಯಿಸದೇ ನೇರ ಕೆಲಸದ ಬಗ್ಗೆ ಕೇಳಿದ್ದನ್ನು ನೋಡಿ ಸಾಧುವಿನ ಮುಖ ಸಣ್ಣಗೆ ಗಂಟಿಕ್ಕಿತು.
ಕೂಡಲೆ ಏರು ದ್ವನಿಯಲ್ಲಿ ಮಾತನಾಡುತ್ತ ಸಾಧು,

"ಸರಿ ವಿಕ್ರಮ, ಇಲ್ಲಿಂದ ನಾಲ್ಕು ಮೈಲಿ ದೂರ ಉತ್ತರ ದಿಕ್ಕಿನಲ್ಲಿ ಒಂದು ಬೃಹತ್ ಗುಹೆ ಇದೆ. ದಿಕ್ಕು ತಪ್ಪಿಯೂ ಅತ್ತಕಡೆ ಯಾವ ಜೀವ ಜಂತುವೂ ಹೋಗಲಾರದು, ಹೋದವರು ತಿರುಗಿಬರಲಾರರು. ಆದರೆ ನನಗೆ ನಿನ್ನಿಂದ ಆಗಬೇಕಾದ ಸಹಾಯ ಆ ಗುಹೆಯಲ್ಲಿಯೇ ಸಾಧ್ಯ. ಗುಹೆಯ ಬಾಗಿಲು ಒಂದು ಬಂಡೆಯಿಂದ ಮುಚ್ಚಲ್ಪಟ್ಟಿದೆ. ಅದನ್ನು ಸರಿಸಿ ಒಳಗೆ ಹೋಗಬೇಕು. ಆ ಗುಹೆಯ ನಡುಭಾಗದಲ್ಲಿ ಒಂದು ಪುರಾತನ ವೃಕ್ಷವೊಂದಿದೆ. ಆ ವೃಕ್ಷದ ಕೊಂಬೆಯ ಮೇಲೆ ಶವವೊಂದು ತೂಗುತ್ತಿದೆ. ನೀನು ಆ ಶವವನ್ನು ನನ್ನಲ್ಲಿಗೆ ತರಬೇಕು. ನನ್ನ ತಂತ್ರ ಸಿದ್ಧಿಯನ್ನು ಪೂರ್ಣಗೊಳಿಸಲು ನನಗೆ ಆ ಶವದ ಅಗತ್ಯವಿದೆ. ಹೆಚ್ಚು ಸಮಯ ವ್ಯರ್ಥ ಮಾಡದೆ ಇಲ್ಲಿಂದ ಹೊರಡು" ಎಂದ.

ಸಾಧು, ವಿಕ್ರಮನಿಂದ ಭಯವನ್ನು ನಿರಿಕ್ಷಿಸಿದ್ದನೆಂದು ತೋರುತ್ತದೆ. ಆದರೆ, ವಿಕ್ರಮ ಸ್ವಲ್ಪವೂ ಚಿಂತಿಸದೆ, ಎಡ ಮೀಸೆಯ ತುದಿಯಲ್ಲಿ ನಗು ತೋರುತ್ತಾ ಅಲ್ಲಿಂದ ಉತ್ತರ ದಿಕ್ಕಿನೆಡೆ ಹೆಜ್ಜೆ ಹಾಕಿದ. ಈ ರೀತಿಯ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿಲ್ಲದ ಸಾಧುವಿನ ಮುಖ ಪುನಃ ಕೆಂಪಿಟ್ಟಿತು.

***

ವಿಕ್ರಮ ನಾಲ್ಕು ಮೈಲಿ ಕ್ರಮಿಸುತ್ತಿದ್ದಂತೆ ದೂರದಲ್ಲಿ ಕಾಣುತ್ತಿದ್ದ ಗುಹೆ. ರಾಕ್ಷಸನ ಬಾಯಿಯಂತಹ ಆಕಾರದ ಗುಹೆ, ಅದರ ಮುಂಬಾಗದಲ್ಲಿ ಬೃಹತ್ ಬಂಡೆ ಗುಹೆಯನ್ನು ಯಾರೂ ಪ್ರವೇಶಿಸದಂತೆ ಮುಚ್ಚಿದೆ.
ವಿಕ್ರಮ ಹತ್ತಿರದ ಮರದ ಸಣ್ಣ ಕೊಂಬೆಯೊಂದನ್ನು ಕತ್ತರಿಸಿ ತಂದು, ಅದನ್ನು ಸನ್ನೆಯಂತೆ ಬಳಸಿ ಗುಹೆಗೆ ಮುಚ್ಚಿದ್ದ ಬಂಡೆಯನ್ನು ಸರಾಗವಾಗಿ ಸರಿಸಿದ. ನಂತರ ತನ್ನ ಹತ್ತಿರವಿದ್ದ ಅಂಗವಸ್ತ್ರವೊಂದನ್ನು ಮರದ ಕೋಲಿಗೆ ಸುತ್ತಿ, ಹತ್ತಿರದಲ್ಲಿ ಯಾವುದೋ ಮರದ ಅಂಟನ್ನು ಅದಕ್ಕೆ ಸುರಿದು, ಮರಕ್ಕೆ ಮರ ಉಜ್ಜಿ ಬೆಂಕಿಯನ್ನು ತಯಾರಿಸಿ, ಚಿಕ್ಕ ದೊಂದಿಯೊಂದನ್ನು ಹೊತ್ತಿಸಿದ.

ಗುಹೆಯನ್ನು ಪ್ರವೇಶಿಸುವ ಮೊದಲು, ಉರಿಯುತ್ತಿದ್ದ ದೊಂದಿಯನ್ನು ಗುಹೆಯ ಮುಂಬಾಗದಲ್ಲಿ ಹಿಡಿದು ಗುಹೆಯಲ್ಲಿ ವಿಷಾನೀಲವೇನಾದರೂ ತುಂಬಿಕೊಂಡಿದೆಯೇ ಎಂದು ಮೊದಲು ಪರೀಕ್ಷಿಸಿದ. ಸ್ವಲ್ಪ ಹೊತ್ತು ಆತ್ತಿತ್ತ ತೂಗಿದ ದೊಂದಿ ನಂತರ ಸರಾಗವಾಗಿ ಉರಿಯತೊಡಗಿತು.

ನಂತರ, ಒಂದು ಕೈಯಲ್ಲಿದ್ದ ಖಡ್ಗದ ಹಿಡಿತ ಸಡಿಲಿಸದೆ, ಇನ್ನೊಂದು ಕೈಯಲ್ಲಿ ದೊಂದಿಯನ್ನು ಹಿಡಿದು, ವಿಕ್ರಮ ಸುತ್ತಲೂ ಜಾಗರೂಕತೆಯಿಂದ ಕಣ್ಣಾಡಿಸುತ್ತ, ಯಾವುದೇ ಕ್ಷಣದಲ್ಲಿ ಆಕ್ರಮಣವಾದರೂ ಹೋರಾಡಲು ಸಿದ್ದವೆಂಬಂತೆ ಒಂದೊಂದೇ ಹೆಜ್ಜೆ ನಿದಾನವಾಗಿ ಮುಂದಕ್ಕಿಡುತ್ತ ಗುಹೆಯೊಳಗೆ ಪ್ರವೇಶಿಸಿದ. ಸುಮಾರು ಹತ್ತು ಹದಿನೈದು ಫರ್ಲಾಂಗು ನಡೆದ ನಂತರ ಆರಂಭದಲ್ಲಿ ಗುಹೆಯಂತೆ ರಚನೆಯಲ್ಲಿದ್ದರೂ ಮುಂದೆ ಗುಹೆಯ ಛಾವಣಿ ತೆರೆದುಕೊಂಡು, ಗುಹೆಯ ಒಳಗೇ, ನಡುಭಾಗದಲ್ಲಿ, ಒಂದು ಚಿಕ್ಕ ಸಮತಟ್ಟಾದ ಜಾಗದಂತೆ ರಚನೆಗೊಂಡಂತಿತ್ತು.
ಸಾಧು ಹೇಳಿದಂತೆ, ಗುಹೆಯ ನಡುವೆ, ಒಣಗಿ ಸುಕ್ಕಾದರೂ ಬೃಹತ್ತಾಗಿ ಬೆಳೆದ ಒಂದು ವೃಕ್ಷ, ರೆಂಬೆ ಕೊಂಬೆಗಳನ್ನು ಚಾಚಿ ನಿಂತಿತ್ತು. ಇಂತಹ ಒಂದು ನಿರ್ಜನ ನಿರ್ಜಂತು ಗುಹೆಯ ಒಳ ಪ್ರದೇಶದಲ್ಲಿ ವೃಕ್ಷವೊಂದು ಬೆಳೆದು ನಿಂತಿದೆ ಎಂದರೆ ವಿಚಿತ್ರವೇ. ವಿಕ್ರಮ ನಿದಾನವಾಗಿ ಹೆಜ್ಜೆ ಇಡುತ್ತ, ವೃಕ್ಷದ ಬಳಿ ನಡೆದ.

ವೃಕ್ಷದ ಬಳಿ ಸಮೀಪಿಸುತ್ತಿದ್ದಂತೆ ವಿಕ್ರಮ ಒಮ್ಮೆ ನಿಂತು ಸುತ್ತಲೂ ದೊಂದಿಯನ್ನು ತೋರಿ ಯಾವುದೇ ಅಪಾಯವಿಲ್ಲ ಎಂಬುದನ್ನು ದೃಢಪಡಿಸಿಕೊಂಡ ನಂತರ, ನೇರ ವೃಕ್ಷದ ಮೇಲೆಲ್ಲಾ ದೃಷ್ಟಿ ಹಾಯಿಸಿದ.

ಸಾಧು ಹೇಳಿದಂತೆ, ಮರದ ಮೂರನೆ ಕೊಂಬೆಯೊಂದರ ಮೇಲೆ ಶವವೊಂದು ನೇತಾಡುತ್ತಿತ್ತು. ಕೈಯಲ್ಲಿದ್ದ ದೊಂದಿಯನ್ನು ಮೇಲೆತ್ತಿ ಶವವನ್ನು ನೋಡಿದ. ಯಾರೋ ತಂದು ಎತ್ತಿಟ್ಟಂತೆ ನಿರಾಳವಾಗಿ ಕೊಂಬೆಯ ಮೇಲೆ ನೇತಾಡುತ್ತಿತ್ತು ಆ ಶವ.

ವೃಕ್ಷದ ಕೊಂಬೆ ಹಾರಿದರೂ ಕೈಗೆ ಎಟುಕದಷ್ಟು ಎತ್ತರದಲ್ಲಿದೆ, ಅಂದರೆ ವೃಕ್ಷವನ್ನು ಹತ್ತಿಯೇ ಶವವನ್ನು ಕೆಳಗಿಳಿಸಬೇಕು.
ದೊಂದಿಯನ್ನು ಮರದ ಪೊಟರೆಗೆ ಸಿಲುಕಿಸಿ, ಖಡ್ಗವನ್ನು ಓರೆಗೆ ಇಳಿಸಿ, ವಿಕ್ರಮ ವೃಕ್ಷದ ಮೊದಲ ಕೊಂಬೆಯೊಂದನ್ನು ಹಾರಿ ಹಿಡಿದು, ಸರಾಗವಾಗಿ ಹತ್ತಿ ಶವದ ಬಳಿ ಹೋದ.

ಶವದಿಂದ ಯಾವುದೇ ವಾಸನೆಯಾಗಲಿ, ಕೊಳೆಯುವಿಕೆಯ ಗುರುತಾಗಲಿ ಕಾಣಸಿಗಲಿಲ್ಲ. ಶವವನ್ನು ಇನ್ನೇನು ವೃಕ್ಷದಿಂದ ಕೆಳಹಾಕೊಣವೆಂದು ಮುಟ್ಟಿದ್ದೇ ತಡ, ಶವ ನಿದ್ದೆಯಿಂದೆದ್ದಂತೆ ಗರಬಡಿಸಿ ಎದ್ದು, ನೇರ ನೆಲಕ್ಕೆ ಧೊಪ್ಪೆಂದು ಬಿದ್ದು ಕಿಟಾರನೆ ಕಿರುಚಿ ಅಳತೊಡಗಿತು.

ಅನಿರಿಕ್ಷಿತವಾಗಿ ಶವವೊಂದು ಗರಬಡಿಸಿ ಎದ್ದದ್ದನ್ನು ನೊಡಿ ವಿಕ್ರಮ, ಎರಡು ಹೆಜ್ಜೆ ಹಿಂದಿಕ್ಕಿ, ಒಂದು ಕೈಲಿ ಮೇಲಿನ ಕೊಂಬೆಯನ್ನು ಹಿಡಿದು ಇನ್ನೊಂದು ಕೈಯಿಂದ ತನ್ನ ಖಡ್ಗವನ್ನು ಹೊರ ತೆಗೆದ.
ವೃಕ್ಷದ ಕೊಂಬೆಯಿಂದ ಕೆಳಗೆ ನೋಡುತ್ತಾನೆ, ಶವ ಬೋರಲು ಮಲಗಿ ಕಿಟಾರೆಂದು ಕಿರುಚಿ ಅಳುತ್ತಿದೆ. ಆ ಸ್ಮಶಾನ ಮೌನ ವಾತಾವರಣದಲ್ಲಿ ಶವದ ಕಿರುಚುವಿಕೆ ಭಯಾನಕವಾಗಿ ಕೇಳಿಬರುತ್ತಿದೆ.

ಕೆಲಕ್ಷಣ ನೋಡಿ, ವಿಕ್ರಮ ಮರದಿಂದ ಕೆಳಗಿಳಿದು, ಶವದಿಂದ ಸ್ವಲ್ಪ ದೂರ ನಿಂತು, "ಯಾರು ನೀನು? ಇಲ್ಲೇನು ಮಾಡುತ್ತಿರುವೆ?" ಎಂದು ಜೋರಾಗಿ ಗದರಿಸಿದ.
ಕೂಡಲೆ ಅಳುತ್ತಿದ್ದ ಶವ ಗಹಗಹಿಸಿ ನಗುತ್ತಾ ತನ್ನಿಂದ ತಾನೇ ಗಾಳಿಯಲ್ಲಿ ಮೆಲೆರತೊಡಗಿ, ಪುನ ಅದೇ ಕೊಂಬೆಗೆ ಹೋಗಿ ನೇತು ಬಿದ್ದಿತು.
ಪುನ ಸತ್ತಂತೆ ಸುಮ್ಮನಾಯಿತು.

ವಿಕ್ರಮನಿಗೆ ಏನೂ ತಿಳಿಯಲಿಲ್ಲ. ಸ್ವಲ್ಪ ಹೊತ್ತು ಆ ಶವದತ್ತ ದಿಟ್ಟಿಸಿ ವಿಕ್ರಮ ಸ್ವಲ್ಪವೂ ಚಲನೆ ಇಲ್ಲದ್ದು ನೊಡಿ, ಪುನ ಕೊಂಬೆಯನ್ನು ಏರಿ ಶವವನ್ನು ಮುಟ್ಟ ಹೋದ.
ಪುನ, ಶವ ಗಡಬರಿಸಿ ಎದ್ದು, ನೆಲಕ್ಕೆ ಧೊಪ್ಪೆಂದು ಬಿದ್ದು ಕಿಟಾರನೆ ಕಿರುಚಿ ಅಳತೊಡಗಿತು.

ವಿಕ್ರಮ, ಮರದಿಂದ ಕೆಳಹಾರಿ, ಖಡ್ಗವನ್ನು ಕೈಯಲ್ಲಿಡಿದು, ಪುನ ಕೇಳಿದ "ಯಾರು ನೀನು, ಹೇಳು, ಈ ರೀತಿ ಏಕೆ ಅಳುತ್ತಿದ್ದಿಯಾ? ಮರದಮೇಲೆ ಏಕೆ ನೇತು ಬಿದ್ದಿದ್ದೀಯ?"
ಆ ಕೂಡಲೆ ಶವ, ಗಹಗಹಿಸಿ ಮತ್ತೆ ನಗುತ್ತಾ ಮೇಲೇರಿ, ಪುನ ಅದೇ ಕೊಂಬೆಗೆ ಹೋಗಿ ನೇತು ಬಿದ್ದು, ಸತ್ತಂತೆ ಸುಮ್ಮನಾಯಿತು.

ವಿಕ್ರಮ, ಒಮ್ಮೆ ನಿಂತು ಆಲೋಚಿಸಿದ, ಇದು ಕೇವಲ ಶವವಲ್ಲ. ಇದೊಂದು ಸತ್ತ ಶವದಲ್ಲಿ ಸೇರಿಕೊಂಡ ಬೇತಾಳ. ಆ ಸಾಧು ಈ ವಿಷಯ ತಿಳಿದೋ ತಿಳಿಯದೆಯೋ ನನ್ನನ್ನು ಈ ಬೆತಾಳವನ್ನು ಹೊತ್ತು ತರಲು ಕಳುಹಿಸಿದ್ದಾನೆ. ನಾನು ಮುಟ್ಟ ಹೋದರೆ ಕೂಡಲೆ ಭೂ ಸ್ಪರ್ಶ ಮಾಡಿ ಅಳುತ್ತದೆ. ನಾನು ಮಾತನಾಡಿದರೆ ಕೂಡಲೆ ಇದು ನಗುತ್ತಾ ಮೇಲೇರಿ ಪುನ ಕೊಂಬೆಗೆ ನೇತು ಬೀಳುತ್ತದೆ. ಅಂದರೆ ಸುಮ್ಮನ್ನಿದ್ದಷ್ಟು ಹೊತ್ತು ಇದು ಸುಮ್ಮನಿರುತ್ತದೆ. ನೆಲ ಸ್ಪರ್ಶ ಮಾಡಿದರೆ ಅಳುತ್ತದೆ. ಮಾತನಾಡಿದರೆ ನಗುತ್ತಾ ಪುನ ಯಥಾ ಸ್ಥಿತಿಗೆ ಮರಳುತ್ತದೆ.

ಮನದಲ್ಲೆ ಲೆಕ್ಕಾಚಾರ ಹಾಕಿದ ವಿಕ್ರಮ, ಪುನ ಮರವನ್ನು ಏರಿ ಶವವನ್ನು ಮುಟ್ಟಿದ, ಕೂಡಲೆ ನೆಲಕ್ಕೆ ಧೊಪ್ಪನೆ ಬಿದ್ದ ಶವ ಕಿಟಾರೆಂದು ಅಳತೊಡಗಿತು. ಮರದ ಮೂರನೆ ಕೊಂಬೆಯಿಂದ ನೇರ ನೆಲಕ್ಕೆ ಜಿಗಿದ ವಿಕ್ರಮ ಅಳುತ್ತಿದ್ದ ಬೆತಾಳವನ್ನು ಎತ್ತಿ ಹೆಗಲಿಗೆ ಹಾಕಿಕೊಂಡು, ಖಡ್ಗವನ್ನು ಕೈಯಲ್ಲಿ ಹಿಡಿದು ಅಲ್ಲಿಂದ ಹೊರಗೆ ಹೆಜ್ಜೆ ಹಾಕತೊಡಗಿದ.

ಭೂ ಸ್ಪರ್ಶದಿಂದ ಮೇಲೆರುತ್ತಿದ್ದಂತೆ ಶವ ಅಳುವುದನ್ನು ನಿಲ್ಲಿಸಿತು. ಸ್ವಲ್ಪವೂ ಅಂಜದೆ, ವಿಕ್ರಮ ನಾಲ್ಕು ಹೆಜ್ಜೆ ಹಾಕಿದ.
ವಿಕ್ರಮ ಮಾತನಾಡದೆ ಸುಮ್ಮನೆ ಹೆಜ್ಜೆ ಹಾಕುತ್ತಿರುವುದನ್ನು ನೊಡಿ ಬೇತಾಳ, ಸರಕ್ಕನೆ ತಿರುಗಿ, ವಿಕ್ರಮನ ಹೆಗಲಿನಿಂದ ಬೆನ್ನಿಗೆ ಏರಿ ಕೂತು ವಿಕ್ರಮನ ಕತ್ತನ್ನು ಬಳಸಿ ಹಿಡಿದುಕೊಂಡಿತು.

ವಿಕ್ರಮ, ಒಂದು ಸ್ವಲ್ಪವೂ ಹೆದರದೆ, ಸಣ್ಣ ಶಬ್ದವನ್ನೂ ಹೊರಡಿಸದೆ, ನಿಂತು ಖಡ್ಗದ ಮೊನೆಯನ್ನು ಬೇತಾಳದ ತಲೆಗೆ ನೇರವಾಗಿ ಹಿಡಿದು 'ನೀನು ಹಿಡಿತ ಸಡಿಲಿಸದಿದ್ದಲ್ಲಿ ತನ್ನ ಖಡ್ಗ ನಿನ್ನ ಶಿರ ತೂರಿಕೊಂಡು ಹೊರಬರಲಿದೆ' ಎಂಬಂತೆ ಸಣ್ಣಗೆ ಒಮ್ಮೆ ತಿವಿದ.
ಕೂಡಲೆ, ಬೇತಾಳ ತನ್ನ ಹಿಡಿತವನ್ನು ಸಡಿಲಿಸಿತು.

ಇಲ್ಲಿಯ ತನಕ ಬರಿಯ ಅಳು ನಗುವೊಂದನ್ನೇ ಮಾಡುತ್ತಿದ್ದ ಬೇತಾಳ, ಮೊದಲ ಬಾರಿ ಮಾತನಾಡಿತು. ವಿಕ್ರಮನ ಹೆಗಲ ಮೇಲೆ ತಲೆಯಿಟ್ಟು ವಿಕ್ರಮನ ಕಿವಿಯಲ್ಲಿ ಹೇಳಿತು,
"ರಾಜಾ ವಿಕ್ರಮ, ಭಲಾ. ನಿನ್ನ ಧೈರ್ಯಕ್ಕೆ, ಬುದ್ದಿಶಕ್ತಿಗೆ ಮೆಚ್ಚಿದೆ. ಹೆ ಹೆ ಹೆ ಹೆ." ಮೆಚ್ಚುಗೆಯಿಂದ ತಲೆಯಾಡಿಸಿತು.

ವಿಕ್ರಮ ತನ್ನ ಖಡ್ಗವನ್ನು ಕೆಳಗಿಳಿಸಿ, ಬಲಗೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಿಂದ ಬೇತಾಳದ ಸೊಂಟವನ್ನು ಹಿಂಬದಿ ಬಳಸಿ ಹಿಡಿದುಕೊಂಡು, ಒಮ್ಮೆ ಮೀಸೆ ಕೆಳಗೆ ನಗುವನ್ನು ತೋರಿಸಿ, ಹೆಜ್ಜೆ ಮುಂದಿಡತೊಡಗಿದ.

ವಿಕ್ರಮ ತುಟಿ ಪಿಟಿಕ್ಕೆನ್ನದೆ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ, ಬೇತಾಳ, ತಾನೇ ಮಾತನಾಡತೊಡಗಿತು, ವಿಕ್ರಮನನ್ನು ಮಾತನಾಡುವಂತೆ ಪ್ರೇರೇಪಿಸ ತೊಡಗಿತು,
"ವಿಕ್ರಮಾ, ರಾಜಾ ವಿಕ್ರಮಾ, ನನ್ನನ್ನು ಎಲ್ಲಿಗೆ ಹೊತ್ತು ಹೋಗುತ್ತಿದ್ದಿಯಾ? ನನ್ನನ್ನು ಬಿಟ್ಟು ಬಿಡು. ನಾನೊಂದು ಬೇತಾಳ. ನಿನಗೆ ಹೆದರಿಕೆ ಆಗುತ್ತಿಲ್ಲವೇ? ನಾನು ಬೇತಾಳ. ನಾನು ನೊಡಲು ವಿಕಾರವಾಗಿಲ್ಲವೇ? ನನ್ನನ್ನು ನಿನ್ನ ಬೆನ್ನಮೇಲೆ ಹೊತ್ತುಕೊಂಡಿದ್ದಿಯ, ಹೆ ಹೆ ಹೆ, ನಾನು ಹಿಂದಿನಿಂದ ನಿನಗೆ ಹಾನಿ ಮಾಡಿದರೆ? ನನ್ನ ಸಹವಾಸ ನಿನಗೇಕೆ? ಬಿಟ್ಟು ಬಿಡು. ನಿನಗೂ ಕ್ಷೇಮ." ಎಂದಿತು.

ವಿಕ್ರಮ ಒಂದು ಸಣ್ಣ ಸದ್ದೂ ಮಾಡದೆ, ಸ್ವಲ್ಪವೂ ಹೆದರಿಕೆ ತೋರಿಸಿ ಕೊಳ್ಳದೆ, ಸಣ್ಣ ನಗು ತೋರಿಸುತ್ತ, 'ಇಲ್ಲ' ಎಂಬಂತೆ ತಲೆಯಾಡಿಸುತ್ತ, ಖಡ್ಗವನ್ನು ಪುನ ಬೇತಾಳನ ತಲೆಗೆ ನೇರವಾಗಿ ಹಿಡಿದ.
ಬೇತಾಳ, ವಿಕ್ರಮನ ಇನ್ನೊಂದು ಹೆಗಲಿಗೆ ತಲೆ ಇರಿಸಿ, "ಸರಿ ಸರಿ ಸರಿ, ನೀನು ಮಾತನಾಡುವುದಿಲ್ಲವೆಂದು ನನಗೆ ತಿಳಿಯಿತು ಬಿಡು. ಖಡ್ಗವನ್ನು ಕೆಳಗಿಳಿಸು. ಹೆ ಹೆ ಹೆ ಹೆ". ಎಂದು ನಕ್ಕಿತು.

ವಿಕ್ರಮ, ಹೆಜ್ಜೆಯನ್ನು ಮುಂದುವರಿಸಿದ. ಬೇತಾಳ ತನ್ನ ಮಾತನ್ನು ಮುಂದುವರಿಸಿ,
"ವಿಕ್ರಮ, ನೀನೂ ಮಾತನಾಡುವುದಿಲ್ಲ, ನನ್ನನ್ನು ಬಿಡುವುದೂ ಇಲ್ಲ. ಎಲ್ಲಿಗೆ ನನ್ನ ಹೊತ್ತೊಯ್ಯುತ್ತಿದ್ದಿಯೋ ನನಗಂತೂ ತಿಳಿದಿಲ್ಲ. ನಮ್ಮ ಪ್ರಯಾಣ ತುಂಬಾ ಬೇಸರವೆನ್ನಿಸುತ್ತಿಲ್ಲವೇ ನಿನಗೆ? ನನಗೇಕೋ ಬಹಳ ಬೇಸರವೆನ್ನಿಸುತ್ತಿದೆ. ಕಳೆದ ಏಳು ವರ್ಷಗಳಿಂದ ನನ್ನೊಂದಿಗೆ ಯಾರೂ ಮಾತನಾಡಿಲ್ಲ. ಎಷ್ಟೊಂದು ಬೇಸರದ ವಿಚಾರವಲ್ಲವೇ? ಈಗ ನೋಡು, ನೀನೂ ಮಾತನಾಡುತ್ತಿಲ್ಲ. ನಮ್ಮ ಪ್ರಯಾಣ ಇನ್ನು ಎಷ್ಟು ಹೊತ್ತು ಹೀಗೆ ಮೌನವಾಗಿ ಕಳೆಯಬೇಕೆಂದಿದ್ದಿಯಾ?"

ವಿಕ್ರಮ, ಓರೇ ಗಣ್ಣಿನಿಂದ ಬೆತಾಳವನ್ನು ನೊಡಿ, ಸ್ವಲ್ಪವೂ ಸದ್ದು ಮಾಡದೆ, ಉಸಿರಿನ ಸದ್ದೂ ಕೇಳದಂತೆ ತಡೆದು, ಸಣ್ಣಗೆ ಮೀಸೆಯ ಕೆಳಗೆ ನಕ್ಕು, ಮುಂದೆ ಹೆಜ್ಜೆ ಇಟ್ಟ.

ವಿಕ್ರಮನ ಪಟ್ಟು ಸಡಿಲಿಸದ ತಾಳ್ಮೆ ನೊಡಿ, ಬೇತಾಳ ಮನದಲ್ಲೇ ಮುಗುಳುನಕ್ಕು ಮಾತು ಮುಂದುವರಿಸಿ,
"ಸರಿ ವಿಕ್ರಮ, ನಿನ್ನ ಮೊಂಡು ಮೌನ ನನಗೆ ಬಹಳ ಬೇಸರ ತರಿಸುತ್ತಿದೆ. ನಮ್ಮ ಪ್ರಯಾಣ ಇನ್ನು ಎಷ್ಟು ದೂರ ಸವಿಸಬೇಕಿದೆಯೋ ನನಗಂತೂ ತಿಳಿಯದು. ನಮ್ಮ ಪ್ರಯಾಣದ ಬೇಸರ ಸವೆಸಲು ನಿನಗೆ ನಾನೊಂದು ಕಥೆ ಹೇಳುತ್ತೇನೆ, ಆಗದೇ? ನಿನಗೂ ನನ್ನ ಹೊತ್ತುಕೊಂಡ ಭಾರ ಬೇರೆ, ಜೊತೆಗೆ ನಿನ್ನ ಮೌನದ ಬೇಸರ ಬೇರೆ, ಎರಡೂ ನೀಗಿದಂತಾಗುತ್ತದೆ."

ವಿಕ್ರಮ ಇದಕ್ಕೂ ಸ್ವಲ್ಪವೂ ಮಾತಿಲ್ಲದೆ, ಸುಮ್ಮನೇ ಮುಂದುವರಿದ.

ಬೇತಾಳ, ವಿಕ್ರಮನ ಇನ್ನೊಂದು ಹೆಗಲಿಗೆ ತನ್ನ ತಲೆ ಇರಿಸಿ, "ಹಾಗಿದ್ದಲ್ಲಿ ನಿನ್ನ ಮೌನವನ್ನು ಸಮ್ಮತಿಯೆಂದೇ ತಿಳಿಯುತ್ತೇನೆ. ಹೆ ಹೆ ಹೆ. ನೀವೇ ಮನುಷ್ಯರೇ ಅಲ್ಲವೇ ಮೌನಂ ಸಮ್ಮತಿ ಲಕ್ಷಣಂ ಎಂದು ಅರ್ಥೈಸಿ ಇಟ್ಟಿದ್ದು. ಹಾಗಿದ್ದಲ್ಲಿ ರಾಜಾ, ಕೇಳು ಈ ಕಥೆಯ...... "


ಮುಂದುವರಿಯುವುದು...