Thursday, October 24, 2013

ವಿಕ್ರಮಾದಿತ್ಯ ಮತ್ತು ಬೇತಾಳ - ಭಾಗ೪ - ಯಾರು ಹಿತವರು ಈ ಮೂವರೊಳಗೆ

ಭಾಗ೧ - ಮಾಂತ್ರಿಕ ಫಲ
ಭಾಗ೨ - ಅಗೋಚರ ಚೇಷ್ಟೆ
ಭಾಗ೩ - ಬೆನ್ನು ಹತ್ತಿದ ಬೇತಾಳ

***

ವಿಕ್ರಮನ ಬೆನ್ನೇರಿದ ಬೇತಾಳ ತನ್ನ ಕಥೆಯನ್ನು ಶುರು ಮಾಡಿತು.
...
"ವಿಕ್ರಮ, ಒಂದಾನೊಂದು ಕಾಲದಲ್ಲಿ, ಒಂದು ಸುಂದರ ನಗರಿಯಲ್ಲಿ, ಒಬ್ಬ ಪುರೋಹಿತನಿಗೆ ಮಂದಾರವತಿ ಎಂಬ ಸುಂದರ, ಸುಕನ್ಯ ಕುವರಿ ಇದ್ದಳು. ಪುರೋಹಿತ ಮತ್ತಾತನ ಹೆಂಡತಿ, ತಮ್ಮ ಒಬ್ಬಳೆ ಮಗಳನ್ನು ತುಂಬು ಪ್ರೀತಿಯಿಂದ, ಅಕ್ಕರೆಯಿಂದ ಬೆಳೆಸಿದ್ದರು. ಕಾಲ ಸರಿದಂತೆ, ಮಂದಾರವತಿ ತುಂಬು ಕನ್ಯೆಯಾಗಿ, ವಿವಾಹ  ಪ್ರಭುದ್ದಳಾಗಿ ಬೆಳೆದು ನಿಂತಂತೆ, ಪುರೋಹಿತ ದಂಪತಿಗಳಿಗೆ ಚಿಂತೆ ಕಾಡತೊಡಗಿತು. ಆಕೆಯ ವಿವಾಹದ ಚಿಂತೆ. ಒಬ್ಬ ಯೋಗ್ಯ ವರನನ್ನು ಹುಡುಕಿ, ತಮ್ಮ ಪ್ರೀತಿಯ ಮಗಳ ಕೈ ಧಾರೆ ಎರೆಯಬೆಕೆಂಬುದೆ ದಂಪತಿಗಳ ಆಶಯ."

ಇಷ್ಟು ಹೇಳಿ ಬೇತಾಳ ವಿಕ್ರಮನ ಇನ್ನೊಂದು ಹೆಗಲಿಗೆ ತನ್ನ ತಲೆಯನ್ನು ಬದಲಾಯಿಸಿ, "ವಿಕ್ರಮ, ಕೆಳಿಸಿಕೊಳ್ಳುತ್ತಿರುವೆ ತಾನೇ? ನಾನೊಬ್ಬನೆ ಮಾತನಾಡಿದರೆ ಹೇಗೆ. ಕಥೆ ಹೇಳುತ್ತಿದ್ದೇನೆ, ಕೊನೆಯಪಕ್ಷ 'ಹ್ನ' ಎಂದಾದರೂ ಹೇಳಬಾರದೆ" ಎಂದಿತು.

ವಿಕ್ರಮ, ಕೆಳಿಸಿಕೊಳ್ಳುತ್ತಿರುವೆ ಎಂಬಂತೆ ತಲೆಯಾಡಿಸಿ, ಸಣ್ಣಗೆ ಮೀಸೆಯ ಕೆಳಗೆ ನಕ್ಕು, ಮುಂದುವರಿದ.

ಬೇತಾಳ, ವಿಕ್ರಮನ ಬಾಯಿಯಿಂದ ಅಷ್ಟು ಸುಲಭದಲ್ಲಿ ಮಾತು ಹೊರಡಿಸಲಾಗದು ಎಂಬುದು ತಿಳಿದಿದ್ದುದರಿಂದ, "ಸರಿ ರಾಜಾ, ಮಾತನಾಡಲು ಇಷ್ಟವಿಲ್ಲದಿದ್ದಲ್ಲಿ ಬೇಡ, ಕಥೆಯನ್ನಾದರೂ ಪೂರ್ತಿ ಕೇಳಿಸಿಕೊ" ಎಂದು ಹೇಳಿ ತನ್ನ ಕಥೆಯನ್ನು ಮುಂದುವರಿಸಿತು.

"ಹೀಗಿರಲು ಒಂದುದಿನ, ಪುರೋಹಿತ ದಂಪತಿಗಳ ಮನೆಗೆ ಮೂವರು ಯುವಕರು ಬಂದು, ಮಂದಾರವತಿಯ ಕೈ ತಮಗೇ ಧಾರೆ ಎರೆಯಬೆಂದು ಕೇಳಿಕೊಂಡರು. ಮೂವರೂ ಯೋಗ್ಯ, ಸುಂದರ, ಧನವಂತ ಯುವಕರೇ. ಮೂವರೂ ಮಂದಾರವತಿಯನ್ನು ಅತೀ ಪ್ರೀತಿಯಿಂದ ನೊಡಿಕೊಳ್ಳಬಲ್ಲವರೇ. ಹೀಗಾಗಿ, ಪುರೋಹಿತ ದಂಪತಿಗಳು ಧರ್ಮ ಸಂಕಟಕ್ಕೆ ಸಿಲುಕಿಕೊಂಡರು. ಸಾಲದೆಂಬಂತೆ, ಮೂವರೂ ಯುವಕರು, ತಮ್ಮ ಬದಲಾಗಿ ಬೇರೆ ಯಾರಿಗೇ ಮಂದಾರವತಿಯನ್ನು ಧಾರೆ ಎರೆದದ್ದೇ ಆದಲ್ಲಿ, ತಾವು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಇಟ್ಟರು. ಪುರೋಹಿತ ದಂಪತಿಗಳು ಏನೂ ತೋಚದೆ, ಕೊನೆಗೆ ಮೂವರಲ್ಲಿ ಯಾರಿಗೂ ಮಂದಾರವತಿಯನ್ನು ಮದುವೆ ಮಾಡದೆ ಆಕೆಯನ್ನು ಕುವರಿಯಾಗಿಯೇ ಇಡಲು ತೀರ್ಮಾನಿಸಿದರು."

"ತಮ್ಮ ಒಬ್ಬಳೇ ಮಗಳ ಜೀವನ ಇಂತಹ ಪರಿಸ್ತಿತಿ ತಲುಪಿತಲ್ಲ ಎಂಬ ಕೊರಗಲ್ಲಿ ಪುರೋಹಿತ ದಂಪತಿಗಳಿಬ್ಬರೂ ಹಾಸಿಗೆ ಹಿಡಿದು, ದೇಹ ತ್ಯಜಿಸಿದರು. ತನ್ನ ಪ್ರೀತಿ ಪಾತ್ರ ಮಾತಾ ಪಿತರ ಅಗಲುವಿಕೆಯನ್ನು ತಾಳಲಾರದ ಮಂದಾರವತಿ, ತಾನೂ ಕೊರಗಿ, ಕೊನೆಗೊಂದು ದಿನ ತಾನೂ ದೇಹ ತ್ಯಜಿಸಿದಳು."

ಇಷ್ಟು ಹೇಳಿ ಬೇತಾಳ, ವಿಕ್ರಮನ ಇನ್ನೊಂದು ಹೆಗಲಮೇಲೆ ತನ್ನ ತಲೆ ಇರಿಸಿ, "ಎಂತಹ ವಿಪರ್ಯಾಸ ಅಲ್ಲವೇ ವಿಕ್ರಮ. ನನಗಂತೂ ಬಹಳ ಕನಿಕರ ವೆನ್ನಿಸುತ್ತಿದೆ" ಎಂದು ಬಹಳ ಕೊರಗಿದವರಂತೆ ನಟಿಸಿತು. ವಿಕ್ರಮ, ಯಾವುದೇ ಬದಲಾವಣೆಗಳನ್ನು ತೋರದೆ, ಸುಮ್ಮನೆ ಮುಂದುವರಿದ.

ಬೇತಾಳ, ತನ್ನ ಕಥೆಯನ್ನು ಮುಂದುವರಿಸಿ,
"ಮಂದಾರವತಿಯನ್ನು ಅತಿಯಾಗಿ ಪ್ರೀತಿಸಿದ ಮೂವರು ಯುವಕರು, ಆಕೆಯನ್ನು ಕಳೆದುಕೊಂಡ ದುಃಖ ತಾಳಲಾರದೇ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜೀವನ ಕಳೆದುಕೊಂಡರು. ಮೂವರೂ ಸೇರಿ ಆಕೆಯ ಕಳೆಬರಹವನ್ನು ದಹನ ಮಾಡಿದರು. ಮೊದಲನೆಯವನು, ಆಕೆಯ ಅಸ್ತಿಗಳನ್ನು ತೆಗೆದುಕೊಂಡು ಗಂಗೆಯಲ್ಲಿ ವಿಸರ್ಜನೆ ಮಾಡಲು ಹೊರಟ. ಎರಡನೆಯವನು ಆಕೆಯ ಕಳೆಬರಹದ ಬೂದಿಯ ಮೇಲೆ ಮಲಗಿ ಅನ್ನಹಾರಗಳನ್ನು ತ್ಯಜಿಸಿದ. ಮೂರನೆಯವನು, ಹುಚ್ಚನಾಗಿ ಊರೂರು ಅಲೆದ."

"ಹೀಗಿರಲು, ಮೂರನೆಯವನು ಅಲೆಯುತ್ತ ಅಲೆಯುತ್ತ, ಒಬ್ಬ ಸಿದ್ದಿಯ ಆಶ್ರಮ ಬಳಿ ತಲುಪಿದ. ಸಿದ್ದಿ, ಈತನ ಪರಿಸ್ತಿತಿಗೆ ಮರುಗಿ, ತನ್ನಲ್ಲಿದ್ದ ಮಂತ್ರ ಪುಸ್ತಕದ ಸಹಾಯದಿಂದ, ಆತನನ್ನು ಮರಳಿ ಸಹಜ ಸ್ಥಿತಿಗೆ ತಂದ. ಸಿದ್ದಿಯ ಮನೆಯಲ್ಲಿಯೇ ತಂಗಿದ ಯುವಕ, ಅದೊಂದು ಅಪೂರ್ವ ಮಂತ್ರ ಪುಸ್ತಕವೆಂದು, ಸತ್ತವರನ್ನೂ ಮರುಬದುಕಿಸುವ ವಿದ್ಯೆಯೂ ಅದರಲ್ಲಿರುವುದಾಗಿ ತಿಳಿದುಬಂದಾಗ, ಒಂದು ರಾತ್ರಿ ಆ ಪುಸ್ತಕವನ್ನು ಕದ್ದು ಆಶ್ರಮದಿಂದ ಹೊತ್ತೊಯ್ದ."

"ಮೂರನೆಯವನು ಆಶ್ರಮದಿಂದ ನೇರ ಮಂದಾರವತಿಯ ಕಳೆಬರಹವನ್ನು ದಹನ ಮಾಡಿದ ಸ್ಥಳಕ್ಕೆ ಬಂದಾಗ, ಮೊದಲನೆಯವನು ಆಕೆಯ ಅಸ್ತಿಯನ್ನು ವಿಸರ್ಜನೆ ಮಾಡಿ ಪವಿತ್ರ ಗಂಗಾಜಲದೊಂದಿಗೆ ಹಿಂದಿರುಗಿದ್ದ. ಎರಡನೆಯವನು ಅಲ್ಲಿಯೇ ಬೂದಿಯಮೆಲೆ ಮಲಗಿದ್ದ. ಮೂರನೆಯವನು, ಪುಸ್ತಕದ ಸಹಾಯದಿಂದ ಮಂತ್ರ ವಿದ್ಯೆಯನ್ನು ಕಲಿತು, ಮಂದಾರವತಿಯ ಕಳೆಬರಹದ ಬೂದಿಯಮೆಲೆ ಮಂತ್ರದೊಂದಿಗೆ ಗಂಗಾಜಲವನ್ನು ಚಿಮುಕಿಸಿದ. ಅತ್ಯಾಶ್ಚರ್ಯ, ಮಂದಾರವತಿ ನಿದ್ದೆಯಿಂದ ಎದ್ದವಳಂತೆ ಎದ್ದು ಮೂವರ ಮುಂದೆ ನಿಂತಿದ್ದಳು."

"ಮೂವರೂ ಯುವಕರಿಗೆ ಆನಂದಕ್ಕೆ ಪಾರವೇ ಇರಲಿಲ್ಲ. ಆದರೆ, ಆ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ. ಪುನಃ ಹಳೆಯ ಸಮಸ್ಯೆಯೇ ಈ ಮೂವರನ್ನು ಕಾಡಿತು. ಮಂದಾರವತಿ ಯಾರನ್ನು ವರಿಸಬೇಕು? ಯಾರು ಆಕೆಗೆ ಸರಿಯಾದ ಪತಿ?"

ಇಷ್ಟು ಹೇಳಿ ಬೇತಾಳ, ವಿಕ್ರಮನೆಡೆ ತಿರುಗಿ, "ನೋಡಿದ್ಯ ವಿಕ್ರಮ, ಮೂವರು ಮತ್ತೆ ಹೇಗೆ ತೊಂದರೆಗೆ ಸಿಲುಕಿಕೊಂಡರು ಎಂದು. ಇದು ಉದ್ದಟತನವಲ್ಲವೇ? ಸತ್ತ ಮಂದಾರವತಿಗೆ ಮರುಜೀವ ನೀಡುವ ಅವಶ್ಯಕತೆಯಾದರೂ ಏನಿದ್ದಿತ್ತು. ಈಗ ಇದೊಂದು ಯಾರೂ ಬಿಡಿಸಲಾಗದ ಜಟಿಲ ಸಮಸ್ಯೆ ಆಯಿತು."
ಬೇತಾಳ ವಿಕ್ರಮನ ಇನ್ನೊಂದು ಹೆಗಲಮೇಲೆ ತನ್ನ ತಲೆ ಇರಿಸಿ, "ರಾಜಾ, ನೀನು ಬಹಳ ಬುದ್ದಿವಂತ ಎಂದು ಕೇಳಿದ್ದೇನೆ. ನಿಮ್ಮ ರಾಜ್ಯದ ಜನರ ಸಮಸ್ಯೆಗಳನ್ನು ಸುಲಭದಲ್ಲಿ ನೆರವೇರಿಸುವೆ ಎಂಬುದನ್ನೂ ಕೇಳಿದ್ದೇನೆ. ಇಂತಹ ಸಮಸ್ಯೆ ನಿನ್ನ ರಾಜ್ಯದಲ್ಲಿ ಬಂದಿದ್ದಲ್ಲಿ ಏನು ಮಾಡುತ್ತಿದ್ದೆ? ನೀನು ಈ ಸಮಸ್ಯೆಗೆ ಸಮಾಧಾನಕರ ಉತ್ತರ ನೀಡಬೇಕು. ನೀನೇ ಹೇಳು ವಿಕ್ರಮ, ಮಂದಾರವತಿ ಆ ಮೂವರು ಯುವಕರಲ್ಲಿ ಯಾರನ್ನು ವರಿಸಬೇಕು? ಯಾರು ಹಿತವರು ಆ ಮೂವರೊಳಗೆ?" ಎಂದಿತು.

ಬೇತಾಳನ ಪ್ರಶ್ನೆ ಕೇಳಿಯೂ, ವಿಕ್ರಮಾದಿತ್ಯ ತುಟಿ ಪಿಟಿಕ್ ಎನ್ನದೆ ಸುಮ್ಮನೆ ನಡೆದ.

ಬೆನ್ನು ಹತ್ತಿ ಕುಳಿತ ಬೇತಾಳ, ಪಟ್ಟು ಬಿಡದೆ, ಮುಖದಲ್ಲಿ ಸ್ವಲ್ಪ ಕೋಪ ತೋರಿಸುತ್ತ, ವಿಕ್ರಮನೆಡೆ ತಿರುಗಿ, "ರಾಜಾ, ನನ್ನ ಪ್ರಶ್ನೆಗೆ ನೀನು ಉತ್ತರ ನೀಡಿಲ್ಲ. ಉತ್ತರ ತಿಳಿದಿಲ್ಲವೇ? ಅಥವಾ ತಿಳಿದೂ ಹೇಳುತ್ತಿಲ್ಲವೆ? ಉತ್ತರ ತಿಳಿಯದಿದ್ದಲ್ಲಿ ಸೋತೆನೆಂದು ಒಪ್ಪಿಕೊ, ತಿಳಿದೂ ನೀನು ಹೇಳದಿದ್ದಲ್ಲಿ ನಿನ್ನ ತಲೆ ಸಿಡಿದು ನೂರು ಹೋಳಾಗುವುದು, ಜಾಗ್ರತಿ" ಎಂದಿತು.

ವಿಕ್ರಮ ತನ್ನ ಮೌನ ಮುರಿದು, "ಹೇ ಬೇತಾಳವೆ, ನಿನ್ನ ಪ್ರಶ್ನೆ ಅತೀ ಸರಳವಾದುದು. ನನ್ನ ತಲೆ ನೂರು ಹೋಳಾಗಲಿದೆ ಎಂಬ ಹೆದರಿಕೆಗಾಗಿ ಅಲ್ಲ, ಒಬ್ಬ ರಾಜನಾಗಿ, ನ್ಯಾಯಯುತವಾದ ಉತ್ತರ ನೀಡುವುದು ಧರ್ಮವೆಂದು ತಿಳಿದು, ಉತ್ತರ ಕೊಡುತ್ತೇನೆ ಕೇಳು,
ಒಂದು ಹೆಣ್ಣಿಗೆ ಜೀವನದಲ್ಲಿ ಗಂಡಿನಾಶ್ರಯವಿದ್ದಲ್ಲಿ ಮಾತ್ರ ಆಕೆಯ ಜೀವನ ಪರಿಪೂರ್ಣ. ಪ್ರಕೃತಿ ನಿಯಮದಂತೆ ಹೆಣ್ಣಿಗೆ ತನ್ನ ಜೀವನದಲ್ಲಿ ಮೂರು ಗಂಡುಗಳ ಆಶ್ರಯ ಸಿಗುವುದು. ಬಾಲ್ಯದಲ್ಲಿ ತಂದೆಯ ಆಶ್ರಯ, ಯವ್ವನದಲ್ಲಿ ಗಂಡನ ಆಶ್ರಯ ಮತ್ತು ಮುಪ್ಪಿನಲ್ಲಿ ಮಗನ ಆಶ್ರಯ. ಮಂದಾರವತಿ ಸತ್ತು ಮರುಜನ್ಮ ಪಡೆದ ಮೇಲೆ, ಪ್ರಕೃತಿ ನಿಯಮದಂತೆ, ಮಂತ್ರ ಶಕ್ತಿಯಿಂದ ಮಂದಾರವತಿಗೆ ಮರುಜೀವ ಕರುಣಿಸಿದ ಮೂರನೇ ಯುವಕ ಆಕೆಯ ಜನ್ಮದಾತನಾದ, ಹಾಗಾಗಿ ಆತ ಮಂದಾರವತಿಯ ತಂದೆಯ ಸ್ಥಾನ ಸ್ವೀಕರಿಸಬೇಕು. ಆಕೆಯ ಅಸ್ತಿಗಳನ್ನು ಗಂಗೆಯಲ್ಲಿ ವಿಸರ್ಜಿಸಿ ಮಂದಾರವತಿಯ ಅಂತ್ಯಸಂಸ್ಕಾರಗಳನ್ನು ನೆರವೇರಿಸಿ ಸಾವಿನ ನಂತರದ ಮರುಹುಟ್ಟಿಗೆ ಕಾರಣನಾದ ಮೊದಲನೇ ಯುವಕ ಆಕೆಯ ಮಗನ ಸ್ಥಾನಕ್ಕೆ ಯೋಗ್ಯನಾದ. ಜೀವನದ ಹಂಗು ತೊರೆದು, ಕಳೆದುಕೊಂಡ ಆಕೆಯ ಪ್ರೀತಿಯ ನೆನೆಯುತ್ತ, ಆಕೆಗಾಗಿಯೇ ಬದುಕಿ ಆಕೆಗಾಗಿಯೇ ಸಾಯುವುದಾಗಿ ನಿಶ್ಚಯಿಸಿದ ಎರಡನೇ ಯುವಕನೇ ಮಂದಾರವತಿಯ ಪತಿಯ ಸ್ಥಾನ ವರಿಸಲು ಯೋಗ್ಯನಾದ."

ಜಟಿಲ ಸಮಸ್ಯೆಗೆ ಸುಲಭದಲ್ಲಿ ಉತ್ತರವಿತ್ತ ವಿಕ್ರಮನ ಜಾಣ್ಮೆಗೆ ಮೆಚ್ಚುಗೆ ತೋರುತ್ತ, ಬೇತಾಳ "ಭಲಾ ವಿಕ್ರಮ ಭಲಾ, ಅಭೂತಪೂರ್ವ ಉತ್ತರ. ನಿಜಕ್ಕೂ ನಿನ್ನ ಜಾಣ್ಮೆಗೆ ಮೆಚ್ಚಿದೆ."
ವಿಕ್ರಮನ ಇನ್ನೊಂದು ಹೆಗಲ ಮೇಲೆ ತಲೆ ಇಡುತ್ತ, ಬೇತಾಳ "ಆದರೆ ನೀನು ನಿನ್ನ ಮೌನ ಮುರಿದೆ. ಹೆ ಹೆ ಹೆ. ನಾನಿದೋ ಹೊರಟೆ. ನಿನಗೆ ನಾನು ದಕ್ಕಲಾರೆ" ಎಂದು ಹೇಳಿ, ವಿಕ್ರಮನ ಹೆಗಲಿನಿಂದ ನೇರ ಆಕಾಶಕ್ಕೆರಿ ಗಾಳಿಯಲ್ಲಿ ತೇಲುತ್ತಾ ತನ್ನ ಮೊದಲಿನ ವೃಕ್ಷಕ್ಕೆ ಹೋಗಿ ನೇತು ಬಿದ್ದಿತು.