ನಾನೇಕೆ ಸಸ್ಯಾಹಾರಿ

ಹುಟ್ಟಿನಿಂದ ಆಹಾರ ಸೇವನೆಯಲ್ಲಿ ನಾನೊಬ್ಬ ಸಸ್ಯಾಹಾರಿ. ನನ್ನ ಅನೇಕ ಸ್ನೇಹಿತರು ಮೊದಲಿನಿಂದ ನನ್ನ ಸಸ್ಯಾಹಾರ ಸೇವನೆಯ ಬಗ್ಗೆ ಕೊಮೆಂಟ್ ಮಾಡುತ್ತಾ ಬಂದಿದ್ದಾರೆ. ಹೆಚ್ಚಿನ ಬಾರಿ ನಾನು ತಲೆ ಕೆಡಿಸಿಕೊಂಡಿಲ್ಲವಾದರೂ, ಕೆಲವೊಮ್ಮೆ ಬೇಸರಗೊಂಡಿದ್ದೆ, ಅವರ ಮಾಂಸಾಹಾರ ಸೇವನೆಯ ಬಗ್ಗೆಗಿನ ಉದ್ದಂಡ ವಾದಕ್ಕೆ ಹೇಗೆ ಉತ್ತರಿಸಬೇಕೆಂದು ತಿಳಿಯದೆ ನಿರಾಶನಾಗಿದ್ದೆ. ಆದರೆ ಇತ್ತೀಚೆಗಿನ ಬೆಳವಣಿಗೆಯಲ್ಲಿ ಈ ಸಸ್ಯಾಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬುದು ಪೂರ್ತಿಯಾಗಿ ಬೆಳಕಿಗೆ ಬರುತ್ತಿದೆ. ಜನ ಮಾಂಸಾಹಾರವನ್ನು ಸಂಪೂರ್ಣ ತ್ಯಜಿಸಿ ಸಸ್ಯಾಹಾರದ ಕಡೆ ವೊಲವು ತೋರಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂಬುದೇ ಅತಿ ಸಂತೋಷದ ಸಂಗತಿ.
ಇಲ್ಲಿ ನಾನು ಮತ್ತು ನನ್ನಂತೆ ಅನೇಕ ಗೆಳೆಯರು ಸಸ್ಯಾಹಾರ ಏಕೆ ಸೇವಿಸುತ್ತಿದ್ದೇವೆ ಅನ್ನುವ ವಿಷಯದಬಗ್ಗೆ ಅನೇಕ ಅಂಶಗಳನ್ನು ಬರೆಯಬೇಕೆಂದಿದ್ದೇನೆ. ಇದು ಕೇವಲ ನನ್ನ ಜತೆ ವಾದಮಾಡುತ್ತಿದ್ದ ನನ್ನ ಸ್ನೇಹಿತರಿಗಾಗಿ ಮಾತ್ರ ಅಲ್ಲ, ಬದಲಿಗೆ ಮಾಂಸಾಹಾರ ಸೇವನೆಯಿಂದ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿರುವ, ಇತ್ತೀಚೆಗೆ ಮಾಂಸಾಹಾರದಿಂದ ಸಸ್ಯಾಹಾರಕ್ಕೆ ಬದಲಾವಣೆಗೊಂಡು ತಾನು ಸರಿಯಾದ ಮಾರ್ಗ ಆರಿಸಿಕೊಂಡೆನೇ ಇಲ್ಲವೇ ಎಂಬ ಸಂಶಯದಲ್ಲಿರುವ, ಮತ್ತು ಮಾಂಸಾಹಾರದಿಂದ ತಮಗೇನು ಹಾನಿಯಾಗುತ್ತಿದೆ, ಪರಿಸರಕ್ಕೇನು ಹಾನಿಯಾಗುತ್ತಿದೆ ಎಂಬುದು ತಿಳಿಯದೇ ಇರುವ ಎಲ್ಲ ಸ್ನೇಹಿತರಿಗಾಗಿ. ಇಲ್ಲಿ ನಾನು ಉದಾಹರಣೆಗೆ ತೆಗೆದುಕೊಂಡಿದ್ದು ಅಮೆರಿಕ ದೇಶವಾದರೂ ಸಮಸ್ಯೆ ಎಲ್ಲೆಡೆ ಒಂದೇ. [ನನ್ನ ರೆಫರೆನ್ಸ್ ಗಾಗಿ ವೈವಾವೆಜಿ ಎಂಬ ಲಿಂಕನ್ನು ಬಳಸಿಕೊಂಡಿದ್ದೇನೆ.]1. 'ಅನಿಮಲ್ ವೆಲ್ಫೇರ್ ಆಕ್ಟ್' ಅನ್ನುವುದು ಫಾರ್ಮ್-ಆನಿಮಲ್ಸ್ ಗಳಿಗೆ ಅನುವಹಿಸುತ್ತಿಲ್ಲ. ಕೆಲವೊಂದು ಕಡೆ ಆನಿಮಲ್ಸ್ ಕೊಲ್ಲುವಾಗ ಅದರ ಹಲ್ಲು ಉಗುರುಗಳನ್ನು ಅವು ಜೀವಂತ ಇರುವಾಗಲೇ ಕಿತ್ತು ತೆಗೆಯುತ್ತಾರೆ, ಯಾವುದೇ ಅನಸ್ತೆಶಿಯ ಇಲ್ಲದೆ. ತಾಯಿ ಪ್ರಾಣಿಗಳ ಮುಂದೆಯೇ ಅವುಗಳ ಮರಿಗಳಿಗೆ ಹೊಡೆದು ಸಾಯಿಸುತ್ತಾರೆ; ಪ್ರಾಣಿಗಳನ್ನು ತಲೆಕೆಳಗೆ ನೇತುಹಾಕಿ ಜೀವಂತ ಇರುವಾಗಲೇ ಅವುಗಳ ಕತ್ತು ಕೊಯ್ದು ನಿದಾನವಾಗಿ ರಕ್ತ ಹರಿಸಿ ಪ್ರಾಣಿಗಳು ವಿಲವಿಲ ಒದ್ದಾಡಿ ಸಾಯುವಂತೆ ಮಾಡುತ್ತಾರೆ; ಕೋಳಿ ಗೂಡಿನಲ್ಲಿ ಅವುಗಳ ಗಾತ್ರಕ್ಕಿಂತ ಚಿಕ್ಕ ಜಾಗದಲ್ಲಿ ಅವುಗಳನ್ನು ತುಂಬಿ, ಒಂದು ಕೋಳಿ ಇನ್ನೊಂದು ಕೋಳಿಯನ್ನು ಮೆಟ್ಟಿ, ಅವುಗಳಿಗೆ ನಿದ್ದೆ ಯಿಲ್ಲದೆ ಬಹಳದಿನ ಹಾಗೆಯೇ ಇಟ್ಟು, ಕೊನೆಗೆ ಯಾವ ಕೋಳಿ ಕಾಯಿಲೆಗೆ ತುತ್ತಾಗುವ ಅಥವಾ ಸಾಯುವ ಸ್ಥಿತಿ ತಲುಪುವುದೋ ಅಂತವನ್ನು ಹಿಡಿದು, ಜೀವಂತ ಇರುವಾಗಲೇ ಅವುಗಳ ಕತ್ತನ್ನು ತಿರುಚಿ ಅವು ಅರ್ಧ ಪ್ರಾಣ ಕಳೆದುಕೊಳ್ಳುವಂತೆ ಮಾಡಿ ನಂತರ ಅವುಗಳ ರೆಕ್ಕೆ ಪುಕ್ಕಗಳನ್ನು ಅರ್ಧ ಜೀವಂತ ಇರುವಾಗಲೇ ಕಿತ್ತು, ಅವುಗಳ ಕೊಕ್ಕನ್ನು ದೊಡ್ಡ ಚಿಮ್ಮಟಿಯಿಂದ ಕತ್ತರಿಸಿ ತೆಗೆದು ಮಾಂಸ ಬೇರ್ಪಡೆಣೆಗೆ ಕಳಿಸುತ್ತಾರೆ. "ಹ್ಯೂಮನ್ ಸ್ಲೌಘ್ತರ್ ಆಕ್ಟ್(Human Slaughter Act)" ಯಾವುದೇ ಕೋಳಿಗಳಿಗೆ ಅಪ್ಪ್ಲೈ ಆಗುವುದಿಲ್ಲ; ಆದರೂ ಕೋಳಿಗಳು ಮಾಂಸಾಹಾರಿಗಳ 95% ಮುಖ್ಯ ತಾರ್ಗೆಟ್ ಗಳು. "28 ಅವರ್ ಲಾ (The 28 hour law)" ಹೇಳುತ್ತೆ, ಯಾವುದೇ ಜೀವಂತ ಜೀವಿಯನ್ನು ಸಾಗಿಸುವಾಗ ಅವುಗಳನ್ನು ವಾಹನದಲ್ಲಿ ಅಥವಾ ಡಬ್ಬಿಗಳಲ್ಲಿ ಭಂದಿಸಿ 28 ಘಂಟೆಗಳಿಂದ ಅವುಗಳಿಗೆ ನೀರು ಆಹಾರ ಕೊಡದೆ ಇರುವಂತಿಲ್ಲ. 28 ಘಂಟೆಗಳ ಒಳಗೇ ಅವನ್ನು ಒಮ್ಮೆಯಾದರೂ ಅನ್-ಲೋಡ್ ಮಾಡಲೇ ಬೇಕು. ಆದರೆ ಈ ಕಾನೂನು ಪಕ್ಷಿಗಳಿಗೆ ಅನ್ವಯಿಸುತ್ತಿಲ್ಲ. ಯಾವುದೇ ಫಾರ್ಮ್-ಹೌಸ್ ನಲ್ಲಿ ಈ ಕಾನೂನು ಪಾಲನೆ ನಡೆಯುತ್ತಿಲ್ಲ. ದೇಶದ ಕೆಲವೊಂದು ರಾಜ್ಯಗಳಲ್ಲಿ ಇದನ್ನು ಅನುಸರಿಸುವಂತೆ ಶಿಸ್ತಿನ ಕ್ರಮ ಕೊಂಡರೂ, ಲೋಕಲ್ ಪೋಲೀಸು ಯಾರು ಇದರಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

2. ಹೆಚ್ಚಿನ ರಿಸರ್ಚ್ ಗಳು ತಿಳಿಸಿದಂತೆ, ಸಸ್ಯಾಹಾರಿಗಳು ಮಾಂಸಾಹಾರಿಗಳಿಗೆ ಹೋಲಿಸಿದರೆ ಕಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುವುದು 40% ಕಡಿಮೆ. ಯೂ.ಎಸ್ ನಲ್ಲಿ ತೋರಿಸಿಕೊಟ್ಟಿದ್ದಾರೆ, ಮಾಂಸವನ್ನು ತ್ಯಜಿಸಿದವರು ಕಾನ್ಸರ್ ಗೆ ತುತ್ತಾಗುವುದು ಕ್ರಮೇಣ ಕಡಿಮೆ ಆಗಿದೆ ಎಂದು. ಹಾರ್ವರ್ಡ್ ನಲ್ಲಿ ರಿಸರ್ಚ್ ಮಾಡಿದಂತೆ, ಮಾಂಸಾಹಾರಿಗಳು ಮೂರುಪಟ್ಟು ಹೆಚ್ಚು ಕೊಲೋನ್ ಕಾನ್ಸರ್(Colon Cancer) ಗೆ ತುತ್ತಾಗಿದ್ದಾರೆ; ಹೇಗೆಂದರೆ ಮಾಂಸ ಪ್ರಾಣಿ ಪ್ರೊಟೀನುಗಳು(animal proteins) ಮತ್ತು ಕೊಬ್ಬುಗಳಿಂದ(fat) ಕೂಡಿದ್ದು, ಫೈಬರ್(fiber) ರಹಿತವಾಗಿದೆ. ಹೆಚ್ಚಿನ ಅಂಶ ಕರ್ಸಿನೋಜೇನ್(carcinogen - like HCAs and PAHs) ಗಳಿಂದ ಕೂಡಿದ ಮಾಂಸ, ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರಾಸೆಸ್ ಮಾಡಿದ ಮತ್ತು ಕೆಂಪು ಬಣ್ಣದ ಮಾಂಸಾಹಾರ ಕೋಲೊರೆಕ್ಟಲ್(colorectal) ಕಾನ್ಸರ್ ಮತ್ತು ಲಂಗ್(Lung), ಪ್ಯಾಂಕ್ರಿಯಾಸ್(Pancreas), ಸ್ಟಮಕ್(Stomach), ಎಂಡೋಮೆಟ್ರಿಯುಮ್(Endometrium) ಕಾನ್ಸರ್ ಗಳಿಗೆ ಹೆಚ್ಚು ಪ್ರತಿಯಾಗಿದೆ. ಬದಲಿಗೆ ಸಸ್ಯಾಹಾರಗಳಲ್ಲಿ ಹೆಚ್ಚಿನಾಂಶ ಅಂಟಿಓಕ್ಸಿಡೆಂಟ್ಸ್(antioxidants) ಗಳು ಮತ್ತು ಆಂಟಿ ಕಾನ್ಸರ್(anti-cancer) ಏಜೆಂಟ್ ಗಳೇ ಇರುತ್ತವೆ.

3. 1961 ರಲ್ಲಿ ಜಗತ್ತಿನ ಮಾಂಸ ತಯಾರಿಕೆ 71 ಮಿಲಿಯನ್ ಟನ್ನುಗಳು, ಅದು 2007 ರಲ್ಲಿ 4 ಪಟ್ಟು ಹೆಚ್ಚಿದೆ. ಕೇವಲ 20 ವರ್ಷದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಯನ್ನು ಪರಿಗಣಿಸಿದರೆ 7 ಪಟ್ಟು ಮಾಂಸಾಹಾರ ಸೇವನೆ ಕೂಡ ಬೆಳೆದಿದೆ. 2050 ರಲ್ಲಿ ಕನಿಷ್ಠ 2 ಪಟ್ಟು ಈಗಿನ ಮಾಂಸಾಹಾರಿಗಳು ಮತ್ತು ಮಾಂಸ ತಯಾರಿಕೆ ಬೆಳೆಯುವ ಸಾದ್ಯತೆ ಇದೆ ಎಂದು ಅಂದಾಜಿಸಲಾಗಿದೆ; ಇದು ಈಗಿನ 2 ಪಟ್ಟು ಪರಿಸರ ನಾಶದಲ್ಲಿ ಮುಖ್ಯ ಪಾತ್ರ ವಹಿಸಲಿದೆ ಎಂದು ಪರಿಣಿತರು ಅಂದಾಜಿಸಿದ್ದರೆ.

4. ಜಗತ್ತಿನಲ್ಲಿ ಮೀನುಗಾರಿಕೆಯಿಂದ ಸುಮಾರು 29% ಮೀನುಗಳ ಸಂತತಿ ನಾಶವಾಗಿದೆ. ಅದರಲ್ಲಿ 10% ಅತೀ ಹಳೆಯದಾದ ಸಂತತಿಗಳು ಎಂದು ಲೆಕ್ಕಿಸಲಾಗಿದೆ. ಒಂದು ಅಂದಾಜಿನಪ್ರಕಾರ 2048 ರಲ್ಲಿ ಸಾಗರದ ಸೇವಿಸಬಲ್ಲ(edible) ಎಲ್ಲ ತರಹದ ಜೀವಿಗಳು ನಶಿಸಿ ಹೋಗುವ ಸಾದ್ಯತೆಗಳಿವೆ. ಇವೆಲ್ಲ ನಮಗೆ ತಿಳಿದೋ ತಿಳಿಯದೆಯೋ, ಮಾರ್ಕೆಟ್ ನಲ್ಲಿ ಇನ್ನೂ ಹೊಸತರದ ಮೀನುಗಳು ಮಾಂಸಾಹಾರಕ್ಕಾಗಿ ಪ್ರದರ್ಶನಕ್ಕೆ ಬರುತ್ತಿವೆ. "ಇಂಟರ್ನೇಷನಲ್ ಪ್ರೊಗ್ರಾಂ ಒನ್ ದ ಸ್ಟೇಟ್ ಆಫ್ ಓಷಿಯನ್(International program on the state of ocean)" 2011 ರ ರಿಪೋರ್ಟ್ ನಂತೆ, ಸಾಗರ ಜೀವಿಗಳು ಎಣಿಸಲಸಾದ್ಯವಾದಷ್ಟು ಅಪಾಯಕಾರಿ ಅಳಿವಿನ ಅಂಚಿನಲ್ಲಿವೆ. ನಮ್ಮನ್ನು ನಾವು ಕೇಳಿಕೊಳ್ಳಬೇಕಾದ್ದು - ಮುಂದೊಂದು ದಿನ ನಮ್ಮ ಮಕ್ಕಳಿಗೆ ಸಾಗರದಲ್ಲಿ ಏನು ತೋರಿಸೋಣ?

5. ಕೇವಲ ಅಮೆರಿಕ ಒಂದೇ ದೇಶದಲ್ಲಿ ಮಾಂಸಾಹಾರ ಸೇವನೆಯಿಂದ 81 ಮಿಲಿಯನ್ ಜನರು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೇವಲ ಹೃದಯ ಸಂಬಂಧಿ ಕಾಯಿಲೆ ಅಮೆರಿಕದ ಏಕೋನೋಮಿಗೆ ವರ್ಷಕ್ಕೆ ಅರ್ಧ ಟ್ರಿಲಿಯನ್ ಖರ್ಚು ತರುತ್ತಿದೆ. ಆದರೆ ಆ ದೇಶದಲ್ಲಿ ಅವರ ಭರವಸೆಗೆ ಸ್ಪೂರ್ತಿ ಎಂಬಂತೆ 82% ಜನ, ಯಾರು ತಮ್ಮ ಮಾಂಸಾಹಾರ ಪದ್ದತಿಯನ್ನು ಬಿಟ್ಟು, ಕಡಿಮೆ ಬೇಯಿಸಿದ, ಹಸಿಯಾದ ಸಸ್ಯಾಹಾರ ಸೇವನೆಗೆ ಬದಲಾಯಿಸಿಕೊಂಡರೊ, ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ವಿಮುಖರಾಗತೊಡಗಿದ್ದಾರೆ. ನಮ್ಮ ದೇಶದಲ್ಲಿ ಏನೆಂದರೆ "ಅಬ್ಬಾ, ಇಂತಹ ಒಂದು ಅಧ್ಯಯನ ಇಂಡಿಯದಲ್ಲಿ ನಡೆಸಿಲ್ಲ, ನಮ್ಮಲ್ಲಿ ಎಷ್ಟು ಜನ ಹೇಗೆ ಸತ್ತರೆ ನನಗೇನೂ, ನಾನು ಈಗ ಮಾಂಸ ತಿನ್ನಬೇಕು, ನಾಳೆಯದು ನಾಳೆ ನೋಡಿಕೊಂಡರಾಯ್ತು".

6. ದನದ ಮಾಂಸ, ಇದರಬಗ್ಗೆ ಹೇಳಲಾದೀತೇ. ನಮ್ಮ ಧಾರ್ಮಿಕತೆಯ ಬಗ್ಗೆ ಬದಿಗಿಡೋಣ, ಇಲ್ಲಿ ಸ್ವಲ್ಪ ಕೇಳಿ. ದನದ ಮಾಂಸದಿಂದ ತ್ಯಜಿಸಲ್ಪಟ್ಟ ಅನುಪಯುಕ್ತ ತ್ಯಾಜಗಳು ಅತೀ ಅಪಾಯಕಾರಿ ಈ.ಕೋಲಿ -O157:H7  ಎಂಬ ಬಾಕ್ಟೀರಿಯ ಗಳಂತಹ ಸೂಕ್ಷ್ಮ ಜಂತುಗಳ ಬೆಳವಣಿಗೆಗೆ ಸಹಾಯಕಾರಿ ಆಗಿದ್ದು, ಅವು ವರ್ಷಕ್ಕೆ 73,000 ಅಮೆರಿಕನ್ಸ್ ಗಳಿಗೆ ಮಾರಣಾಂತಿಕ ಕಾಯಿಲೆ ತರುತ್ತಿವೆ (ಇದು ಇಲ್ಲಿಯತನಕ ಸಿಕ್ಕ ಸಣ್ಣ ಹಿಂಟ್ ಅಷ್ಟೇ). ಸದ್ಯಕ್ಕೆ ಇದರಬಗ್ಗೆ ಕ್ರಮ ಕೈಗೊಳ್ಳಲು ಯೂ.ಎಸ್ ಬಳಿ ಯಾವುದೇ ಪಾಲಸೀ ಗಳಿಲ್ಲ. ಅಷ್ಟೇ ಅಲ್ಲ ಇದರಂತೆ ಇನ್ನೂ 6 ಬೇರೆ ಬೇರೆ ಈ.ಕೋಲಿ(E.Coli) ಬಾಕ್ಟೀರಿಯಗಳು ಪತ್ತೆಯಾಗಿದ್ದು, 30,000 ಕ್ಕೂ ಹೆಚ್ಚು ಅಮೆರಿಕನ್ ಜನರು ಅದಕ್ಕೆ ತುತ್ತಾಗುತ್ತಿದ್ದರೂ, ಕೆಲವೇ ಲ್ಯಾಬೊರಟರಿಗಳು ಇದರಬಗ್ಗೆ ಸಮಯ ವ್ಯರ್ಥ ಸಂಶೋಧನೆ ನಡೆಸುತ್ತಿವೆ.

7. ಅಮೆರಿಕದ ಒಬ್ಬ ಮಾಂಸ ಉತ್ಪಾದನೆಯ ಮೆಲ್ವಿಚ್ಚರಕ 2010 ರಲ್ಲಿ ವಿಷಿಲ್-ಬ್ಲೋ (WiKi Leaks - whistle blower) ಮಾಡಿದ, 'ಅಮೆರಿಕದಲ್ಲಿ ಹಂದಿಗಳ ಸಾಕಾಣಿಕೆ ಕೇಂದ್ರದಲ್ಲಿ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತಲೆಕೆಳಗೆ ನೇತುಹಾಕಿ, ಜೀವಂತ ಇರುವಾಗಲೇ ಅವುಗಳ ಕತ್ತು ಅರ್ಧ ಕತ್ತರಿಸಿ ರಕ್ತವನ್ನು ಹರಿಸಿ ಕೊಲ್ಲಲಾಗುತ್ತಿದೆ. ಅಲ್ಲದೆ ವಾಹನಗಳಲ್ಲಿ ತುಂಬುವಾಗ ಮತ್ತು ವಾಹನಗಳಿಂದ ಇಳಿಸುವಾಗ ನಿರ್ದಾಕ್ಷಿಣ್ಯವಾಗಿ ಎಸೆಯಲಾಗುತ್ತಿದ್ದು, ಅವುಗಳನ್ನು ಗುಂಪು ಗುಂಪಾಗಿ ಕೂಡಿ ಹಾಕಿ, ಬೇಕೆಂದೆ ಒಂದನ್ನು ಇನ್ನೊಂದು ತುಳಿದು ಘಾಸಿಗೊಳ್ಳುವಂತೆ ನಡೆಸಿಕೊಳ್ಳಲಾಗುತ್ತಿದೆ'(ಇಷ್ಟು ಹೇಳಿದ್ದಕ್ಕೆ ಅವನನ್ನು ಇನ್ನೂ ಭಯಾನಕ ಕ್ರೂರವಾಗಿ ಪ್ರಾಣಿಗಳನ್ನು ಕೊಲ್ಲುವ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತಂತೆ). ಯೂ.ಎಸ್ ನಲ್ಲಿ "ಹ್ಯೂಮನ್ ಮೆಥಡ್ಸ್ ಆಫ್ ಸ್ಲೌಘ್ತರ್ ಆಕ್ಟ್ (Human Methods of Slaughter Act)"ಗೆ ಅಷ್ಟೊಂದು ಪ್ರಾಮುಕ್ಯತೆ ಕೊಟ್ಟಿಲ್ಲ ಮತ್ತು ಕೇವಲ 1% ಬಡ್ಜೆಟ್ ಅನ್ನು ಆಹಾರ ತಯಾರಿಕಾ ಸುರಕ್ಷತೆಗೆ ವಿನಿಯೋಗಿಸಲಾಗುತ್ತಿದೆ. ಭಾರತದಲ್ಲಿ? ಕೇಳಬೇಡಿ, ನಮಗೆ ಮಾಂಸ ತಿನ್ನೋದೊಂದೇ ಗೊತ್ತು.

8. ಜಗತ್ತಿನಲ್ಲಿ ಕಲುಷಿತಗೊಳ್ಳದೇ ಇರುವ ನೀರಿನ ಅಂಶವೆಂದರೆ ಅತೀ ಕಡಿಮೆ ಪ್ರತಿಶತದಷ್ಟು. 70% ದಷ್ಟು ನೀರನ್ನು ನಾವು ವ್ಯವಸಾಯಕ್ಕೆ ಬಳಸುತ್ತೇವೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇಲ್ಲಿ ವ್ಯವಸಾಯ ಎಂದರೆ ಏನು ಮತ್ತು ಯಾಕೆ? ಕೇಳಿ. ಅಂಕಿ ಅಂಶಗಳ ಪ್ರಕಾರ, ಅಧಿಕ ಮಾಂಸಾಹಾರದ ಬೇಡಿಕೆಯಿಂದ 2030 ರ ಸುಮಾರಿಗೆ ಜಗತ್ತಿನ ನೀರಿನ ಬೇಡಿಕೆ, ನೀರಿಗಾಗಿ ಹಾಹಾಕಾರ 40% ಜಾಸ್ತಿಯಾಗುವ ಸಾದ್ಯತೆ ಇದೆ. ಇಲ್ಲಿ ನಾವು ತಿಳಿಯಬೇಕಾದದ್ದು ನಾವು ಬೆಳೆದ ಅರ್ಧದಷ್ಟು ಬೆಳೆಗಳನ್ನು ನಮ್ಮ ಮಾಂಸಾಹಾರಕ್ಕಾಗಿ ಸಾಕುವ ಜೀವಿಗಳ ಆಹಾರಕ್ಕಾಗಿ ಬಳಸಲಾಗುತ್ತಿದೆ. ಹಾಗಾದರೆ ನಾವು ವ್ಯವಸಾಯ ಎಂದೇನೂ ಕರೆಯುತ್ತೇವೆಯೋ, ಅದು ಬೆಳೆಗಳ ವ್ಯವಸಾಯವೋ ಅಥವಾ ಮಾಂಸಕ್ಕಾಗಿ ಸಾಕುವ ಜೀವಿಗಳ ವ್ಯವಸಾಯವೋ? ಕೇಳಿಕೊಳ್ಳಬೇಕಿದೆ. ಇಲ್ಲಿ ಕೇಳಿ, ನೀವು ಕೆ.ಎಫ್.ಸಿ ಅಥವಾ ಎಲ್ಲೆ ನೋನ್-ವೇಜ್ ತಿನ್ನುವ ಜಾಗದಲ್ಲಿ ಇಷ್ಟಪಟ್ಟು ತಿನ್ನುವ ಹ್ಯಾಂಬರ್ಗರ್(Hamburger - a kind of sandwich consisting of rich amount of ground-beef) ತಯಾರಿಕೆಯಲ್ಲಿ 634 ಗ್ಯಾಲೋನ್(gallon) ನೀರು ಬಳಕೆಯಾಗುತ್ತಿದೆ, ಅದು ಒಮ್ಮೆ ಗೋಧಿ ಬೆಳೆಯಲು ಬೇಕಾಗುವ ನೀರಿನ 25 ಪಟ್ಟು ಹೆಚ್ಚು.

9. ಅತ್ಯಂತ ವ್ಯಾಪಕ ತನಿಖೆ ಎಂದರೆ - ಚೈನ ದಲ್ಲಿ ನಡೆಸಿದ ಆಹಾರಪದ್ದತಿ ಮತ್ತು ಜೀವನ ಸ್ಥಿತಿಗತಿ ಬಗ್ಗೆಗಿನ ವೈಚಾರಿಕ ಚಿಂತನೆ. ಚೀನಾದ ಈ ತನಿಖೆಯ ಪ್ರಕಾರ ಅತೀ ಕಡಿಮೆ ಪ್ರಮಾಣದ ಪ್ರಾಣಿ ಪ್ರೊಟೀನುಗಳ ಸೇವನೆ ಕೂಡ ಧೀರ್ಘಕಾಲದ ಕಾಯಿಲೆಗೆ ಮನುಷ್ಯನನ್ನು ಎಳೆದೊಯ್ಯುತ್ತಿದೆ. ಈ ತನಿಖೆಯಲ್ಲಿ ತಿಳಿದಂತೆ, ಅನೇಕ ಸಾಂಕ್ರಾಮಿಕ ರೋಗಗಳ ಅಧ್ಯಯನ ಬಲವಾಗಿ ಮಾಂಸಾಹಾರ ಸೇವನೆಗಳ ಮೇಲೆ ಆಧರಿಸಿದ್ದು, ಅವು ಮಾಂಸಾಹಾರಿ ಸೇವನೆಯ ಜನರ ಮತ್ತು ಸಸ್ಯಾಹಾರಿ ಸೇವನೆಗಳ ಜನರ ಜೀವಿತ ಪದ್ದತಿಗಳಮೇಲೆ ಬಹಳ ವ್ಯತ್ಯಾಸದಾಯಕ ಪರಿಣಾಮ ಬಿರಿವೆ.

10. ಇಂದು, ತಮ್ಮ ಲಾಭಾಂಶ ಹೆಚ್ಚಿಸುವುದಕ್ಕೋಸ್ಕರ ದೊಡ್ಡ ಸಾಕಾಣಿಕಾ ಕೇಂದ್ರಗಳು ಬದಲಾವಣೆಗೊಂಡು ಚಿಕ್ಕ ಚಿಕ್ಕ ಕಳಪೆ ಗುಣಮಟ್ಟದ ಪ್ರಾಣಿಗಳನ್ನು ಕೂಡಿಹಾಕುವ ಕಾರಾಗ್ರಹ ಕೋಣೆಗಳಾಗಿವೆ. ಕೋಳಿ ಸಾಕಾಣಿಕಾ ಕೇಂದ್ರ ಒಂದು ಅಸಹ್ಯ ಉದ್ಯೋಗವಾಗಿ ಮಾರ್ಪಟ್ಟಿದೆ. ಕೆಲಸಗಾರರು ಇಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಉಳಿಯಲಾರರು. ಈ ಸಾಕಾಣಿಕಾ ಕೇಂದ್ರಗಳ ಮಾಲೀಕರು ಒಳ್ಳೆಯ ಕೆಲಸದ ಪ್ರದೇಶಗಳನ್ನು ಒದಗಿಸುವುದಕ್ಕೆ ನಿರಾಕರಿಸುತ್ತಾರೆ. ಕೆಲಸಗಾರರ ಜೀವನವೂ ಅಸಮರ್ಥಕ. ಎಂತಹ ಜೀವಿಗಳ ಜತೆ ಬದುಕಬೇಕೆಂದರೆ, ದಿನವೂ ರೆಕ್ಕೆ ಪುಕ್ಕಗಳನ್ನು ಕತ್ತರಿಸಿಕೊಂಡು ಹಾರಾಡಲಾಗದೆ ವಿಲ ವಿಲ ಒದ್ದಾಡುವ ಪ್ರಾಣಿ ಪಕ್ಷಿಗಳು, ಒಂದನ್ನೊಂದು ತುಳಿದು ಬದುಕಲು ಹೆಣಗುತ್ತ ಅರ್ಧ ಸತ್ತ ಜೀವಿಗಳ ಮೂಖಾರೋದನ, ಯಾವಾಗ ತನ್ನ ಒಡಲಿಗೆ ಕತ್ತಿ ಏಟು ಬೀಳುವುದೋ ಎಂದು ದಿನವೂ ಹೆದರಿ ಬದುಕುವ ಪ್ರಾಣಿ ಪಕ್ಷಿಗಳ ಮಾನಸಿಕ ದುಗುಡ; ಇವೆಲ್ಲದರ ಮಧ್ಯ ಬದುಕು ಒಂದು ಮಾನಸಿಕ ಹಿಂಸೆಯಲ್ಲದೆ ಬೇರೇನು? ಸುಮಾರು 15% ಕೆಲಸಗಾರರು ಅಂಗಾಂಗಗಳಲ್ಲಿ ಗಾಯ, ಕಡಿತಗಳೇ ಮುಂತಾದ ರೋಗಗಳಿಗೆ ದಿನವೂ ತುತ್ತಾಗುತ್ತಿದ್ದು ಅವರ ದೇಹ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ.

11. ಇಂದು ಕೆಲವೇ ಕೆಲವು ತೆರೆದ ಪ್ರದೇಶಗಳಲ್ಲಿ, ಉದ್ಯಮದ ಮೂಲಕ ಮಾಂಸದ ಉತ್ಪತ್ತಿ ಮಾಡಲಾಗುತ್ತಿದೆ. ಅತೀ ಹೆಚ್ಚಿನ ಉತ್ಪತ್ತಿಗಳು ಸಣ್ಣಪ್ರಮಾಣದ ಕಾರ್ಯಾಚರಣೆಗಳಿಂದಲೇ ಬರುತ್ತಿವೆ. ಅಂದರೆ ಇವೆಲ್ಲ ಉತ್ಪತ್ತಿಗಳ ಬೆಲೆ ನಿರ್ಧಾರ, ಉತ್ಪಾದನೆಯ ನಿಯಮಗಳು ಕೇವಲ ಕೆಲವೇ ಕಿಂಗ್-ಪಿನ್ ಗಳ ಕೈಯಲ್ಲಿದ್ದೆ. ಸಾಂಪ್ರದಾಯಿಕ ಬೆಲೆ ನಿರ್ಧರಣೆ ಇಲ್ಲಿ ಕಂಡುಬರುವುದಿಲ್ಲ. ಬೆಲೆಗಳು ಕೆಲವು ಕೊಳ್ಳುವ ಕಂಪನಿಗಳು, ಸಾಗಾಣಿಕ ಕೇಂದ್ರಗಳು, ಸೂಪರ್-ಮಾರ್ಕೆಟ್ ಗಳು ನಿರ್ಧಾರ ಮಾಡುತ್ತವೆ. ಇದರಿಂದ ಉತ್ಪಾದಕರು ಕಡಿಮೆ ಲಾಭದ ಕಹಿ ಅನುಭವಿಸುತ್ತಾರೆ. ಇದರಿಂದ ಸಣ್ಣಪ್ರಮಾಣದ ಉತ್ಪಾದಕರು ತಮ್ಮ ಉತ್ಪಾದನೆ ಮತ್ತು ಲಾಭವನ್ನು ಹೆಚ್ಚಿಸುವ ಕಾರಣಕ್ಕಾಗಿ ಅತಿಕಡಿಮೆ ಸುರಕ್ಷಿತ ಪದ್ದತಿಗಳನ್ನು ಅನುಸರಿಸಿ ಜನರಿಗೆ ಕಳಪೆ ಗುಣಮಟ್ಟದ ಪದಾರ್ಥವನ್ನು ಉಣಬಡಿಸುತ್ತಿದ್ದಾರೆ.

12. ನಾವು ಮನುಷ್ಯರು ನಮ್ಮ 99% ಡಿ.ಎನ್.ಏ ಯಲ್ಲಿ ಚಿಂಪಾಂಜಿಯನ್ನು ಹೋಲುತ್ತೇವಂತೆ, 90% ಇಲಿಗಳೊಂದಿಗೆ, 80% ಆಕಳೊಂದಿಗೆ, 75% ನಾಯಿಗೆ ಮತ್ತು 33% ಡ್ಯಾಫೋಡಿಲ್ಸ್ ನೊಂದಿಗೆ ಹೋಲುತ್ತೇವಂತೆ. ವಿಜ್ನಾನಿಗಳು ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಾರೆ. ಅವರ ಅನ್ವೇಷಣೆಯಂತೆ ಪ್ರಾಣಿಗಳಿಗೆ (ಮಾಂಸಕ್ಕಾಗಿ ಸಾಕುವ ಪ್ರಾಣಿಗಳನ್ನೂ ಸೇರಿಸಿ) ಉಚ್ಚ ಮಟ್ಟದ ಅರಿವು ಮತ್ತು ಸಂವಹನ ಪ್ರಕ್ರಿಯೆ ಇವೆಯಂತೆ. ಪ್ರಾಣಿಗಳು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವಲ್ಲಿ ಉನ್ನತ ಮಟ್ಟದ ಪ್ರತಿಕ್ರಿಯೆ ತೋರಿಸಿವೆ. ಭಯದ ಭಾವನೆಗಳಿಂದ ಹಿಡಿದು ಕುತೂಹಲದ ಭಾವನೆಗಳ ಎಲ್ಲ ಸ್ತರಗಳನ್ನು ಅವು ವ್ಯಕ್ತ ಪಡಿಸಿವೆ. ಅವು ಕನಿಕರ ಅಥವಾ ಇನ್ನೊಂದು ಜೀವಿಯ ಸಹಾಯಕ್ಕಾಗಿ ಕ್ರಿಯಗೊಳ್ಳುವಿಕೆ, ಇನ್ನೊಂದು ಪ್ರಾಣಿಯ ಗಾಯವನ್ನು ವಾಸಿಮಾಡುವಲ್ಲಿ ಅದರ ಸಹಾಯ ಮಾಡುವಿಕೆ ಇಂತಹದೇ ಅನೇಕ ಭಾವನೆಗಳನ್ನು ತೋರಿಸಿದ್ದಾವೆ. ಕೆಲವು ಪ್ರಾಣಿಗಳು ಕ್ರಿಯಾತ್ಮಕ ಚಟುವಟಿಕೆಗಳಲ್ಲೂ ಕಾಣಿಸಿಕೊಂಡಿದ್ದಾವೆ. ಹಂದಿಗಳಿಗೆ ಮನುಷ್ಯನಂತೆ ಕನ್ನಡಿಯ ಪರಿಕಲ್ಪನೆ ಅರ್ಥವಾಗುತ್ತಂತೆ, ಕುರಿಗಳು 50 ಬೇರೆ ಬೇರೆ ಜಾತಿಯ ಕುರಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆಯಂತೆ, ಹಸುಗಳು ವ್ಯಕ್ತಪಡಿಸುವ ಭಾವನೆಗಳ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಇಂತಿರುವಾಗ ನಾವು ಅವುಗಳಿಗೆ ಕೊಡುತ್ತಿರುವ ಚಿತ್ರಹಿಂಸೆ ಎಂತಹ ಘೋರ. ಮಾನವ ಬೆಳೆಬೆಳೆಯುತ್ತಾ ಜೀವಿಗಳನ್ನು ಪ್ರೀತಿಸಬೇಕಿತ್ತು, ವಸ್ತುಗಳನ್ನು ಉಪಯೋಗಿಸಬೇಕಿತ್ತು; ಆದರೆ ನಾವು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ ಜೀವಿಗಳನ್ನು ಉಪಯೋಗಿಸುತ್ತಿದ್ದೇವೆ.

13. ವಾತಾವರಣದ ನೈಟ್ರೋಜನ್ ಗಳನ್ನು ಫರ್ಟಿಲೈಜರ್ ಗಳಾಗಿ ಬದಲಾವಣೆ ಮಾಡುವ ರಾಸಾಯನಿಕ ಪ್ರತಿಕ್ರಿಯೆಯನ್ನು ಕಂಡು ಹುಡುಕಿದ್ದು ಬಹುಶ ವ್ಯವಸಾಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. 1905 ರಿಂದ ಇದು ಆಹಾರ ತಯಾರಿಕೆಯಲ್ಲಿ ಮತ್ತು ಆಹಾರ ವಿತರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿತು; ಮನುಷ್ಯ ತನಗೆ ಮಾತ್ರವಲ್ಲದೆ, ತನಗೆ ಬೇಕಷ್ಟು ಇಟ್ಟುಕೊಂಡು ತಾನು ಆಹಾರಕ್ಕಾಗಿ ಸಾಕುವ ಜೀವಿಗಳಿಗೂ ಉಣಬಡಿಸತೊಡಗಿದ. ಈ ಕೃತಿ ಮುಂದುವರೆದು, ಮನುಷ್ಯ ಕ್ರಮೇಣ ಮಾಂಸಾಹಾರಕ್ಕೆ ಹೆಚ್ಚು ಹೆಚ್ಚು ಮೊರೆಹೋಗುವಂತಾಯಿತು. ಮನುಷ್ಯನ ಮಾಂಸಾಹಾರ ಸೇವನೆ ಹೆಚ್ಚಾದಂತೆ, ಗಾಳಿ, ನೀರು, ಭೂಮಿಗಳಾದಿಯಾಗಿ ಮಾಲಿನ್ಯದ ಹೊರೆ ಹೊರಲಾರಂಬಿಸಿದವು. ಮಾಂಸ ತ್ಯಾಜ್ಯಗಳು, ಹಾನಿಕಾರಕ ಆಲ್ಗೆಗಳು, ಆಮ್ಲ ಲವಣಗಳು ಭೂಮಿಯಾದ್ಯಂತ ಆವರಿಸಿಕೊಂಡವು. ವಾತಾವರಣದಲ್ಲಿ ಬದಲಾವಣೆಗಳು ಕಂಡುಬಂದವು.

14. ಜೆನೆಟಿಕ್ಸ್ ಎನ್ನುವುದು ಈಗಿನ ಕೃಷಿ ಮತ್ತು ಔಷಧ ತಯಾರಿಕಾ ವಿಭಾಗಗಳಿಗೆ ಗಟ್ಟಿಯಾಗಿ ಭಂದಿಸಲ್ಪಟ್ಟಿದೆ ಎಂದರೆ ತಪ್ಪಾಗಲಾರದು. ಪ್ರಾಣಿಗಳು ತಮ್ಮ ಡಿ.ಎನ್.ಏಯಿಂದ ಹಿಡಿದು ಅವಶೇಷಗಳವರೆಗೂ ಮಾನವನ ಈ ಕೈಗಾರಿಕಾ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ವತ್ತಾಯಪೂರ್ವಕ ಹೊಂದಿಕೊಳ್ಳಲೇ ಬೇಕಾಗಿದೆ. ಎಲ್ಲಿಯತನಕ ಮನುಷ್ಯನ ಜೇನಿಟಿಕ್ಸ್ ಮೇಲಿನ ಕ್ರಿಯೆ ಪ್ರಚೋದಿಸಲ್ಪಟ್ಟಿವೆ ಎಂದರೆ ಪ್ರಾಣಿಗಳೂ ಕೂಡ ಅತೀ ವೇಗವಾಗಿ ಸಂತಾನೋತ್ಪತ್ತಿ, ಸಂತಾನ-ಪುನರೊತ್ಪತ್ತಿ ಮಾಡಿಕೊಡಬೇಕಿದೆ, ಅದೂ ಕೂಡ ಅವುಗಳಿಗೆ ಆಹಾರವೆಂದು ನೀಡುವ ಕಳಪೆ ಪದಾರ್ಥಗಳನ್ನು ತಿಂದು. ಎಂತಹ ಪರಿಸ್ಥಿತಿ ಅವುಗಳದ್ದೆಂದರೆ, ಪ್ರಾಣಿಗಳು ಮನುಷ್ಯನ ಇಚ್ಚೆಯ ಉತ್ಪತ್ತಿ ನೀಡಲು ಯೋಗ್ಯವಿಲ್ಲದಿದ್ದಲ್ಲಿ, ಆತನ ಮನ ತಣಿಸಲು ಕೊನೆಯಪಕ್ಷ ಹೊಸ ವಿನ್ಯಾಸದ, ಅಥವಾ ಹೊಸ ರುಚಿಯನ್ನು ತರಬಲ್ಲ, ಅಥವಾ ಮನುಷ್ಯನ ಹಣದಾಹ ಪೂರೈಸಬಲ್ಲ ಯಾವುದಾದರೂ ಒಂದು ರೀತಿಯಲ್ಲಿ ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಲೇ ಬೇಕು. ಇದೇ ತಾನೇ ಮನುಷ್ಯನ ಜೇನಿಟಿಕ್ಸ್ ಇಂಜಿನೀರಿಂಗ್? ಇಂದು ಮಾನವ ವಿಜ್ನಾನದ ಹೆಸರಲ್ಲಿ, ಜೇನಿಟಿಕಲ್ ಇಂಜಿನೀರಿಂಗ್ ಎಂಬ ಹೆಸರಲ್ಲಿ ತನ್ನ ಲ್ಯಾಬರೇಟರಿಯಲ್ಲಿ ಹೇಳಿ ಕೇಳರಿಯದ ಪ್ರಾಣಿ ಪಕ್ಷಿಗಳನ್ನು ಸ್ರಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾನೆ; ಇದರ ಹೊರಮುಖ ಹೊಸ ಸಂಶೋದನೆಯಂತೆ ಕಂಡರೂ, ಇದು ಮನುಷ್ಯ ತನ್ನ ಮಾಂಸದಾಹ ತೀರಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರ. ಫಾರಂ ಕೋಳಿಗಳ ಬಗ್ಗೆ ಹೇಳಬೇಕೆ? ಅದೊಂದು ಕೇವಲ ಮಾಂಸದ ಮುದ್ದೆ, ಅಷ್ಟೇ. ಎಲ್ಲಿಗೆ ಹೋಗುತ್ತಿದೆ ನಮ್ಮ ಸಂಶೋಧನೆಯ ಹಾದಿ?

15. 2006 ರಲ್ಲಿ "ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್/ಯೂ.ಎನ್" (Food and Agricultural Organization/UN) ಒಂದು ಆಘಾತಕಾರಿ ಹೇಳಿಕೆಯನ್ನು (Livestock’s Long Shadow) ಹೊರಹಾಕಿತು - ಜಗತ್ತಿನಲ್ಲಿ 18% ದಷ್ಟು ಹ್ಯೂಮನ್-ಕಾಸಡ್ ಗ್ರೀನ್ಹೌಸ್ ಗ್ಯಾಸ್ (Human-Caused Greenhouse Gases - ಹಸಿರುಮನೆ ಪರಿಣಾಮವನ್ನುಂಟುಮಾಡುವ ಅನಿಲಗಳು) ಉತ್ಪತ್ತಿ ಈ ಮಾಂಸಾಹಾರ ಮತ್ತು ಮಾಂಸಾಹಾರಿಗಳಿಂದಲೇ ಆಗುತ್ತಿದೆ; ಆದರೆ ವಾಹನಗಳಿಂದ ಹೊರಸೂಸಲ್ಪಟ್ಟ ಹಸಿರುಮನೆ ಪರಿಣಾಮವನ್ನುಂಟುಮಾಡುವ ಅನಿಲಗಳು ಕೇವಲ 13% ಮಾತ್ರ. ಕೂಡಲೇ "ವಲ್ಡ್-ವಾಚ್ ಇನ್ಸ್ಟಿಟ್ಯೂಟ್ (World-Watch Institute) ಹೇಳಿತು "ಆ 18% ಕೇವಲ ಮೌಲ್ಯಮಾಪನಕ್ಕೆ ತೆಗೆದುಕೊಂಡ ಮೊತ್ತ ಅಷ್ಟೇ, ಅದು 51% ದಷ್ಟು ಹೆಚ್ಚಾಗುತ್ತಿದೆ".

16. ಇಲ್ಲಿಯತನಕ ನಂಬಲಾಗಿದ್ದೆಂದರೆ, ಮನುಷ್ಯನಿಗೆ ಪ್ರಾಣಿಗಳನ್ನು ಆಹಾರಕ್ಕಾಗಿ ಸಾಕುವುದರ ಜತೆಗೆ ಅದರಿಂದ ವ್ಯವಸಾಯಕ್ಕಾಗಿ ಗೊಬ್ಬರಗಳನ್ನೂ ಪಡೆಯಬಹುದಾಗಿದೆ. ಕೇಳಲು ಸಂತೋಶವೆನ್ನಿಸುತ್ತಿದೆಯೇ? ಹಾಗಾದರೆ ಕೇಳಿ, 1997 ರ ಯೂ.ಎಸ್.ಡಿ.ಏ ರಿಪೋರ್ಟ್ ನ ಕೆಲವೊಂದು ಅಂಕಿಯಂಶಗಳ ಪ್ರಕಾರ, ಅಮೆರಿಕದಲ್ಲಿ ಪ್ರತಿ ವರ್ಷಕ್ಕೆ 1.37 ಬಿಲಿಯನ್ ಟನ್ ಈ ಜಾನುವಾರು ತ್ಯಾಜ್ಯಗಳು (Livestock waste) ಉತ್ಪತ್ತಿಯಾಗುತ್ತಿವೆ. ಇದನ್ನು ಅಮೆರಿಕದ ಎಲ್ಲ ಜನತೆಗೆ ಸಮನಾಗಿ ಹಂಚಿದರೆ ಒಬ್ಬೊಬ್ಬ ಅಮೆರಿಕ ಪ್ರಜೆಗೆ 5 ಟನ್ ಜಾನುವಾರು ತ್ಯಾಜ್ಯಗಳು ದೊರಕುತ್ತವೆ(ತಿನ್ನೋದಿಕ್ಕಲ್ಲ). ಇಲ್ಲಿ ಪ್ರಶ್ನೆ ಬರುವುದು ಎಷ್ಟು ಜನ ಅಮೆರಿಕನ್ನರು ಈ ತ್ಯಾಜವನ್ನಿಟ್ಟುಕೊಂಡು ವ್ಯವಸಾಯ ಮಾಡುತ್ತಾರೆ? ಕೇವಲ, ಬೆರಳೆಣಿಕೆಯಷ್ಟು. ಸರಿ, ಉಳಿದ ತ್ಯಾಜ್ಯಗಳನ್ನು ಏನು ಮಾಡುವುದು? ಅವೆಲ್ಲ ಬೈ-ಪ್ರಾಡಕ್ಟ್ ಎಂದು ತೆಗೆದುಕೊಳ್ಳಲಾಗುವುದಿಲ್ಲ, ಅವೆಲ್ಲ ತ್ಯಾಜ್ಯವಸ್ತುಗಳ ಗುಂಪಿಗೆ, ಪರಿಸರ ಮಾಲಿನ್ಯ ಕಾರಕಗಳ ಗುಂಪಿಗೆ ಸೇರುತ್ತವೆ. ಇದು ಅಮೆರಿಕದ ಹಣೆಬರಹ, ಭಾರತದಲ್ಲಿ ಇದರಬಗ್ಗೆ ಮಾತನಾಡಲು ನಮಗೆ ಪುರುಸೊತ್ತೆಲ್ಲಿದೆ.

17. ಕೈಗಾರಿಕರಣದಿಂದ ಪರಿಸರ ನಾಶದಬಗ್ಗೆ ನಮಗೆಲ್ಲ ತಿಳಿದೇ ಇದೆ. ಅದರ ಜತೆ ವ್ಯವಸಾಯದಲ್ಲಿ ಈ ಕೈಗಾರಿಕಾರಣವನ್ನು ಬಳಸುತ್ತಿರುವುದು ಪರಿಸರ ಮಾಲಿನ್ಯಕ್ಕೆ ಇನ್ನಷ್ಟು ಪೂರಕ ಕೊಟ್ಟಿದೆ. ಮುಖ್ಯವಾಗಿ ನೀರು, ಫಲವತ್ತಾದ ಮಣ್ಣು ಮತ್ತು ನೈಸರ್ಗಿಕದತ್ತ ಇಂಧನಗಳು ಇದರಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಅಸಹನೀಯ. ಇಂದು ಫಲವತ್ತಾದ ಬೇಸಾಯದ ಭೂಮಿ ಮರುಭೂಮಿಯಾಗುತ್ತಿದೆ, ಕಾಡುಗಳು ನಶಿಸಿ ಹೋಗುತ್ತಿವೆ ಎಂಬ ಕೂಗು ಕೇಳಿಬರುತ್ತಿದ್ದರೂ, ವ್ಯವಸಾಯದಲ್ಲಿ ಕೈಗಾರಿಕರಣ ಮಾತ್ರ ಭರದಿಂದ ಸಾಗುತ್ತಿದೆ - ಮೊದಲೇ ಹೇಳಿದಂತೆ ಈ ವ್ಯವಸಾಯದಲ್ಲಿ ಹೆಚ್ಚಿನಾಂಶ ಮನುಷ್ಯ ಮಾಂಸಕ್ಕಾಗಿ ಸಾಕುವ ಪ್ರಾಣಿ ಪಕ್ಷಿಗಳ ಆಹಾರಕಾಗಿ ವಿನಿಯೋಗವಾಗುತ್ತಿದೆ - ಅಂತೆಯೇ ಮಾಂಸದ ಉತ್ಪಾದನೆ ಕೂಡ ಭರದಲ್ಲಿ ಬೆಳೆಯುತ್ತಿದೆ. ಅತೀ ವಿಷಾದದ ಸಂಗತಿ ಎಂದರೆ, ಸುಮಾರು 50% ಕ್ಕೂ ಹೆಚ್ಚು ಬೆಳೆಗಳನ್ನು ಮಾಂಸ ಉತ್ಪಾದನೆಗೆ ಬಳಸುತ್ತಿದ್ದರೂ, ಒಂದು ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಸುಮಾರು 925 ಮಿಲಿಯನ್ ಜನ (ಅಂದರೆ ಸುಮಾರು ಪ್ರತಿ 7 ಜನರಲ್ಲಿ ಒಬ್ಬ) ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಎಂತಹ ವಿಪರ್ಯಾಸ ನೋಡಿ. ಪೌಷ್ಟಿಕತೆಯ ಕಥೆ ಬಿಡಿ, ಕೊನೆಯಪಕ್ಷ ಅವುಗಳ ಆಹಾರಕ್ಕೆ ಬಳಕೆಯಾಗುತ್ತಿರುವ ಬೆಳೆಗಳ ಸಮಪ್ರಮಾಣಕ್ಕೆ (feed-to-flesh conversion) ಮಾಂಸದ ಉತ್ಪಾದನೆಯಾದರೂ ಆಗುತ್ತಿದೆಯೇ? ಅದೂ ಇಲ್ಲ, ಕೇಳಿ, ಬೀಫ್ 8:1 ಪ್ರಮಾಣದಲ್ಲಿ, ಪೋರ್ಕ್ 3.5:1 ಪ್ರಮಾಣ, ಚಿಕ್ಕನ್ 3:1 ಪ್ರಮಾಣ ಮತ್ತು ಮೀನು 2:1 ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿವೆ. ಎಷ್ಟೊಂದು ಪ್ರಮಾಣದಲ್ಲಿ ಆಹಾರದ ದುರ್ಬಳಕೆ ನಡೆಯುತ್ತಿದೆ. ನಾವೆಲ್ಲ ಅನಾಥರಿಗೆ, ಕೈಲಾಗದವರಿಗೆ, ಬಡಬಗ್ಗರಿಗೆ ದಾನ ಮಾಡುವ ವಿಷಯದಬಗ್ಗೆ ಭಾಷಣ ಕೊಡುತ್ತಿದ್ದೇವೆ.

18. ಅಮೆರಿಕದಲ್ಲಿ ಒಂದು ವರ್ಷಕ್ಕೆ ಸುಮಾರು 29 ಮಿಲಿಯನ್ ಪೌಂಡ್ ನಷ್ಟು ಆಂಟಿಬಯೊಟಿಕ್ಸ್ ಗಳನ್ನು ಮಾಂಸ ಉತ್ಪಾದಕ ಪ್ರಾಣಿ ಪಕ್ಷಿಗಳಿಗೆ ತಿನ್ನಿಸಲಾಗುತ್ತಿದೆ. ಆಹಾರಕ್ಕಾಗಿ ಸಾಕುವ ಜೀವಿಗಳು ಆರೋಗ್ಯವಾಗಿದ್ದರೂ, ಅವುಗಳ ಕಡಿಮೆ ಆಹಾರದಲ್ಲಿಯೂ ದಷ್ಟ ಪುಷ್ಟವಾಗಿ ಬೆಳವಣಿಗೆಗೆ ಹಾಗೂ ವೇಗದ ಬೆಳವಣಿಗೆಗಾಗಿ ದಿನವೂ ಅವಕ್ಕೆ ಕಡಿಮೆ ಡೋಸೇಜ್ ನ ಡ್ರಗ್ಸ್ ಗಳನ್ನು ತಿನ್ನಿಸಲಾಗುತ್ತಿದೆ. ಈ ಅಂಶಗಳನ್ನು ಲೆಕ್ಕಹಾಕಿದ ವಿಜ್ನಾನಿಗಳು ಹೌಹಾರಿದ್ದಾರೆ, ಇದು ಮನುಷ್ಯ ತೆಗೆದುಕೊಳ್ಳುವ ಆಂಟಿಬಯೊಟಿಕ್ಸ್ ಗಳ 8 ಪಟ್ಟು ಹೆಚ್ಚು. ಆಹಾರಕ್ಕಾಗಿ ಸಾಕುವ ಜೀವಿಗಳಿಗೆ ಆಂಟಿಬಯೊಟಿಕ್ಸ್ ತಿನ್ನಿಸುವ ಪ್ರಮಾಣವು ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎಂಬ ವಿಜ್ನಾನಿಗಳ ಸಲಹೆಯನ್ನು ಮೀರಿ 1940 ರಿಂದ ಇಲ್ಲಿಯವರೆಗೆ ಏರುತ್ತಲೇ ಬಂದಿದೆ. ಇದರಿಂದ ಪ್ರಾಣಿ ಪಕ್ಷಿಗಳಲ್ಲಿದ್ದ ವೈರಸ್ ಬಾಕ್ಟೀರಿಯಾಗಳು ಆ ಆಂಟಿಬಯೊಟಿಕ್ಸ್ ಗೆ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತಿದ್ದು, ಕ್ರಮೇಣ ಮನುಷ್ಯನಿಗೆ ಕಾಯಿಲೆಗಳ ವಿರುದ್ದ ಬೇಕಾದ ಆಂಟಿಬಯೊಟಿಕ್ಸ್ ನ ಪ್ರಮಾಣ ಈ ಬ್ಯಾಕ್ಟೀರಿಯಾಗಳ ಪ್ರತಿರೋಧವನ್ನು ತಡೆಯದಷ್ಟು ಕ್ಷೀಣವಾಗುತ್ತಿವೆ. ಮುಂದೊಂದುದಿನ ಮನುಷ್ಯನ ಆಂಟಿಬಯೊಟಿಕ್ಸ್ ನ ಶಕ್ತಿ ಈ ವೈರಸ್, ಬ್ಯಾಕ್ಟೀರಿಯಾಗಳ ಮುಂದೆ ನಿಲ್ಲದಾಗುತ್ತದೆ. ಬಹುಶ ಅಂತಹದೊಂದು ಪರಿಸ್ಥಿತಿ ಆಗಲೇ ಉದ್ಭವಿಸಿದಂತಿದೆ. ಹಂದಿಗಳಿಗೆ ಬರುತ್ತಿದ್ದ ಸ್ವೈನ್-ಫ್ಲೂ (Swine Flu) ಅಥವಾ ಎಚ್1ಎನ್1 ಈಗ ವಿಶ್ವದಾದ್ಯಂತ ಮನುಷ್ಯನಮೇಲೆ ದಾಳಿ ಮಾಡಿದ್ದು, ಈ ವೈರಸ್ ಗಳಿಗೆ ಮದ್ದು ಕಂಡುಹಿಡಿಯಲು ಮಾನವ ಹರಸಾಹಸ ಪಡುತ್ತಿದ್ದಾನೆ.

19. ಫೈಬರ್ ಅಥವಾ ನಾರು ಪದಾರ್ಥ ಇದು ಕರುಳಿನಲ್ಲಿರುವ ನೀರಿನ ಪ್ರಮಾಣವನ್ನು ಹಿಡಿದಿಟ್ಟುಕೊಂಡು ಜೀವಕ್ರಿಯಲ್ಲಿ ಮತ್ತು ಪಚನಕ್ರಿಯೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ನಾರು ಪದಾರ್ಥಗಳನ್ನು ಕೇವಲ ಸಸ್ಯಜನ್ಯ ಆಹಾರದಿಂದ ಪಡೆಯಬಹುದಾಗಿದೆ. ವೈಜ್ನಾನಿಕವಾಗಿ ತಿಳಿಸಿದಂತೆ ಪ್ರತಿ ಮನುಷ್ಯ ದಿನಕ್ಕೆ ಸರಾಸರಿ ಕನಿಷ್ಠ ಪಕ್ಷ 35 ಗ್ರಾಂ ಫೈಬರ್ ಯುಕ್ತ ಆಹಾರವನ್ನು ಸೇವಿಸಬೇಕಿದೆ. ಇಲ್ಲದಿದ್ದಲ್ಲಿ ಮಲಬದ್ದತೆ, ಕೊಲೈಟಿಸ್, ಕೋಲನ್ ಕ್ಯಾನ್ಸರ್, ಹೆಮ್ಮೋರೋಯ್ಡ್ ನಂತಹ  ಹಲವಾರು ಖಾಯಿಲೆಗಳಿಗೆ ತುತ್ತಗಬೇಕಾಗುತ್ತದೆ. ಆದರೆ ಅಂಕಿ ಅಂಶಗಳ ಪ್ರಕಾರ ಇಂದು ಅಮೆರಿಕದ ಮಾಂಸ ಪ್ರಿಯ ಜನರು ದಿನಕ್ಕೆ 12 ಗ್ರಾಂ ನಷ್ಟೂ ಫೈಬರ್ ಯುಕ್ತ ಆಹಾರ ಸೇವನೆ ನಡೆಸುತ್ತಿಲ್ಲ.

20. ಗೋಮಾಳ ಮಾಂಸ ಸುಮಾರು ತೈಲ ಯುಗ ಕಾಲದಿಂದಲೂ ಬಂದಿರುವ ಒಂದು ಉತ್ಪನ್ನ ಎನ್ನಬಹುದು. ಹಿಂದಿನಂತೆ ಕಡಿಮೆ ದರದಲ್ಲಿ ಇಂದು ತೈಲ ದೊರೆಯುತ್ತಿಲ್ಲ, ಹಾಗಾಗಿ ಕಡಿಮೆ ದರದಲ್ಲಿ ಮಾಂಸ ಕೂಡ ದೊರೆಯುತ್ತಿಲ್ಲ. ಒಂದು ಪೌಂಡು ಗೋಮಾಂಸ ತಯಾರಿಕೆಗೆ ಸುಮಾರು ಮೂರು ಗ್ಯಾಲೋನ್ ನಷ್ಟು ತೈಲ ವ್ಯಯಿಸಬೇಕು. ಒಂದು ಸಾವಿರ ಪೌಂಡ್ ಮಾಂಸಕ್ಕೆ ಸರಿಸುಮಾರು 9 ಭಾರಿಗಾತ್ರದ ಬ್ಯಾರೆಲ್ಲ್ ಗಳಲ್ಲಿ ತೈಲಗಳನ್ನು ವ್ಯಯಿಸಬೇಕು. ಅಂದರೆ 1 ಕ್ಯಾಲೋರಿಯಷ್ಟು ಗೋಮಾಂಸದ ಪ್ರೊಟೀನು ತಯಾರಿಕೆಗೆ 40 ಕ್ಯಾಲೋರಿಯಷ್ಟು ತೈಲ ಬೇಕು. ಇದಕ್ಕೆ ಹೋಲಿಸಿದರೆ ಕೇವಲ 2.2 ಕ್ಯಾಲೋರಿಯಷ್ಟು ತೈಲ ಸಾಕು 1 ಕ್ಯಾಲೋರಿ ಸಸ್ಯಜನ್ಯ ಪ್ರೊಟೀನು ತಯಾರಿಕೆಗೆ. ಹೀಗೆ ನಡೆದರೆ ಮುಂದೊಂದು ದಿನ ಎಲ್ಲಿಂದ ತರೋಣ ತೈಲ?

21. ಮೀನುಗಾರಿಕೆ ಇದರಬಗ್ಗೆ ಮೇಲೆ ಹೇಳಿದ್ದೆನಷ್ಟೆ. ಇಂದು ಹೆಚ್ಚಿನ ಎಲ್ಲ ಮೀನುಗಾರರು ತಮ್ಮಲ್ಲಿ ಅತ್ಯಾಧುನಿಕ ಉಪಕರಣಗಳು, ಜಿ.ಪಿ.ಎಸ್, ಸೋನಾರ್ ಉಪಕರಣಗಳು, ಸಣ್ಣ ಕ್ರಿಮಿಯೂ ನುಸುಳದಂತ ತೆಳ್ಳನೆಯ ಬಲೆಗಳು, ಬ್ರಹತ್ ಹಡಗುಗಳು, ಮುಂತಾದವೇ ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿದ್ದಾರೆ - ಯಾವ ಮೀನೂ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಒಂದು ಅಂದಾಜಿನ ಪ್ರಕಾರ ಜಗತ್ತಿನ ಮೀನುಗಾರರು ಒಂದು ವರ್ಷಕ್ಕೆ 1.4 ಬಿಲಿಯನ್ ಬಾರಿ ಬಲೆಬೀಸಿ ಮೀನು ಹಿಡಿಯುತ್ತಿದ್ದಾರಂತೆ, ಅವರ ಒಂದೊಂದು ದೊಡ್ಡ ಬಲೆ ಸುಮಾರು 747 ಜೆಟ್ ವಿಮಾನಗಳನ್ನು ಸುಲಭದಲ್ಲಿ ಒಮ್ಮೆಲೇ ಭಂಧಿಸಿ ಹಿಡಿಯಬಹುದಾದಷ್ಟು ಅಗಲವಾಗಿದೆ, ಮತ್ತಷ್ಟೇ ಶಕ್ತಿಶಾಲಿಯಾಗಿದೆ ಕೂಡ. ಸಾಗರದ ಜೀವಿಗಳ ಗತಿ ಏನಾಗಬೇಡ ನೀವೇ ಊಹಿಸಿ. ಇದಕ್ಕೆ ಇನ್ನಷ್ಟು ಮೆರಗು ಕೊಡುತ್ತೇನೆ ಕೇಳಿ, ಮೀನುಗಾರಿಕೆಯಲ್ಲಿ ಸುಮ್ಮನೆ ಸಿಕ್ಕಿದ ಎಲ್ಲ ಮಿನುಗಳನ್ನು ಹಿಡಿಯುವುದಿಲ್ಲ. ಮೀನುಗಳಲ್ಲಿಯೂ ತಿನ್ನಲು ಯೋಗ್ಯವಾದ ಮೀನುಗಳು (ದೊರಕುವಿಕೆಯ ಪ್ರಮಾಣ, ಮತ್ತು ಮಾಂಸೋತ್ಪತ್ತಿಯ ಪ್ರಮಾಣದ ಮೇಲೆ), ತಿನ್ನಲು ಅಯೋಗ್ಯವಾದ ಮೀನು (ಅಯೋಗ್ಯ ಶಬ್ದ ಮೀನಿಗೆ ಬಳಸಲೋ ಅಥವಾ ಮೀನು ತಿನ್ನುವವರಿಗೆ ಬಳಸಲೋ ತಿಳಿಯುತ್ತಿಲ್ಲ) ಹೀಗೆ ಎರಡು ಜಾತಿಗಳಿವೆ. ಮೀನುಗಾರಿಕೆಯವರ ಭಾಷೆಯಲ್ಲಿ ಹೇಳುವುದಾದರೆ, ಟಾರ್ಗೆಟೆಡ್ ಸ್ಪೀಶಿಸ್ (Targeted Species) ಮತ್ತು ಅನ್-ಟಾರ್ಗೆಟೆಡ್ ಸ್ಪೀಶಿಸ್ ಎಂಬ ವಿಧಗಳು. ಒಮ್ಮೆ ಬಲೆ ಬೀಸಿದರೆ ಸುಮಾರು 25% ಅನ್-ಟಾರ್ಗೆಟೆಡ್ ಸ್ಪೀಶಿಸ್ ಗಳೇ ಬಲೆಯಲ್ಲಿ ಸಿಲುಕಿಕೊಳ್ಳುತ್ತವೆಯಂತೆ,  ಮೀನನ್ನೇನು ಹುಡುಕಿ ಬೇಟೆಯಾಡಲಾಡಿತೆ? ಸ್ಪೀಶಿಸ್ ಎಂದರೆ ಬರೇ ಮೀನುಗಳಾಗಿರಬೇಕೆಂದಿಲ್ಲ ಇತರ ಜಲಚರಗಳೂ ಸೇರಿ. ಬಲೆಯಲ್ಲಿ ಬಂದ ಅನ್-ಟಾರ್ಗೆಟೆಡ್ ಸ್ಪೀಶಿಸ್ ಗಳನ್ನು ಏನು ಮಾಡುವುದು, ಕೊಂದೋ , ಘಾಸಿಗೊಳಿಸಿಯೋ ಅದೇ ನೀರಿಗೆ ಎಸೆಯುತ್ತಾರೆ. ಇತ್ತ ಹಿಡಿದ ಜೀವಿ ಮನುಷ್ಯನಿಗೆ ತಿನ್ನಲೂ ದೊರೆತಿಲ್ಲ, ಬದುಕಲೂ ಯೋಗ್ಯವಿಲ್ಲದಾಗಿ ಸತ್ತು ನೀರಲ್ಲಿ ಕೊಳೆಯಿತು. ಇವೆಲ್ಲ ಕೇವಲ ಅಂಕಿಯಂಶಗಳಷ್ಟೇ, ವಾಸ್ತವದಲ್ಲಿ ಇದರ ಪ್ರಮಾಣ 4 ರಷ್ಟು ಇನ್ನೂ ಹೆಚ್ಚಿದೆ. ನಿಜ ಹೇಳಬೇಕೆಂದರೆ, ಇದು ತಂತ್ರಜ್ನಾನದ ಸದುಪಯೋಗವೊ, ಅಥವಾ  ಸಾಗರದ ಜೀವಿಗಳ ಸಂತತಿ ವಿನಾಶಕ್ಕೆ ಮಾಡಿದ ಪ್ರತಿಜ್ನೆಯೋ ಒಂದೂ ತಿಳಿಯುತ್ತಿಲ್ಲ.

22. ನಿಮಗೆ ಗೊತ್ತೇ, ಕಪ್ಪೆಗಳ ಕಾಲು ಫ್ರಾನ್ಸ್, ಚೀನಾ, ಥೈಲ್ಯಾಂಡ್, ವಿಯೆಟ್ನಾಂ, ಸ್ಪೈನ್, ಸ್ಲೊವೇನಿಯಗಳೇ ಮುಂತಾದ ದೇಶ  ಗಳಲ್ಲಿ ಒಂದು ಉತ್ತಮ ರುಚಿಕರ ಖ್ಯಾದ್ಯವಂತೆ. ಮನುಷ್ಯನ ತುಚ್ಚ ನಾಲಿಗೆ ರುಚಿಗಾಗಿ ಪ್ರತೀವರ್ಷ ಬಿಲಿಯನ್ ಗಳಷ್ಟು ಕಪ್ಪೆಗಳನ್ನು ಹಿಡಿದು ಕೊಲ್ಲಲಾಗುತ್ತಿದೆ. ಮನುಷ್ಯನ ಈ ಲೂಟಿ, ಹಲವು ಉಭಯಚರಗಳ ಸಂತತಿಯನ್ನು ನಾಶದತ್ತ ಕೊಂಡೊಯ್ಯುತ್ತಿದೆ ಅನ್ನುವುದೇ ಚಿಂತಾಜನಕ ವಿಷಯವಾಗಿದೆ.

...ಮುಂದುವರಿಯುವುದು...

4 comments:

 1. ಒಳ್ಳೆದಿದೆ.. ಮುಂದುವರೆಸಿ. ಮಾಹಿತಿಗಾಗಿ ತುಂಬಾ ಧನ್ಯವಾದಗಳು.

  ReplyDelete
 2. v nicely written !

  ಒಂದು ಹಸು 1 ಕಿಲೋ ತೂಕ ಹೆಚ್ಚಿಸಲು, ಅವುಗಳಿಗೆ 20 ಕಿಲೋ ಧಾನ್ಯಗಳು ಆಹಾರಕ್ಕಾಗಿ ತಿನ್ನಲು ನೀಡಬೇಕು!
  ಇಪ್ಪತ್ತು ಕಿಲೋ ಧಾನ್ಯಗಳು ಮನುಷ್ಯರೇ ತಿನ್ನಬಹುದಿತ್ತು !

  ReplyDelete
 3. ಮಾಹಿತಿ ಬಹಳ ಚೆನ್ನಾಗಿದೆ.
  I agree with you.

  ReplyDelete
 4. ನಾವು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ ಜೀವಿಗಳನ್ನು ಉಪಯೋಗಿಸುತ್ತಿದ್ದೇವೆ. :(

  ReplyDelete